ಹೊಸದಿಲ್ಲಿ/ಹೈದರಾಬಾದ್: ಕೋವಿಡ್ 19 ಘಾತಕ್ಕೆ ಸಿಲುಕಿರುವ ಆಂಧ್ರಪ್ರದೇಶದಲ್ಲಿ ಸೋಂಕು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದು, ದೇಶದ ಕೋವಿಡ್ 19 ಹಾಟ್‌ಸ್ಪಾಟ್ ರಾಜ್ಯಗಳ ಪೈಕಿ ಈಗ ಆಂಧ್ರ ಮೂರನೇ ಸ್ಥಾನಕ್ಕೇರಿದೆ.
ಕಳೆದ 3 ದಿನಗಳಲ್ಲಿ ಇಲ್ಲಿ 30 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ. ಜುಲೈ ತಿಂಗಳೊಂದರಲ್ಲೇ ಇಲ್ಲಿನ ಸೋಂಕಿತರ ಸಂಖ್ಯೆಯಲ್ಲಿ ಶೇ.865ರಷ್ಟು ಏರಿಕೆ ಕಂಡುಬಂದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಯಾವುದೇ ರಾಜ್ಯದಲ್ಲೂ ಒಂದೇ ತಿಂಗಳಲ್ಲಿ ಸೋಂಕು ಪ್ರಕರಣಗಳು ಇಷ್ಟೊಂದು ಏರಿಕೆಯಾಗಿರಲಿಲ್ಲ.
3ನೇ ಸ್ಥಾನ: ಜೂನ್ 30ರಂದು ಆಂಧ್ರದಲ್ಲಿ 14,596 ಪ್ರಕರಣಗಳು ಪತ್ತೆಯಾಗಿದ್ದವು. ಜುಲೈ ಅಂತ್ಯದ ವೇಳೆಗೆ ಈ ಸಂಖ್ಯೆ 1.26 ಲಕ್ಷಕ್ಕೇರಿದೆ. ರಾಜ್ಯದ ಅತಿ ಹೆಚ್ಚು ಜನಬಾಹುಳ್ಯವುಳ್ಳ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಶೇ.1,800ರಷ್ಟು ಏರಿಕೆ ಕಂಡುಬಂದಿದೆ.
ಶುಕ್ರವಾರದಿಂದ ಶನಿವಾರದವರೆಗಿನ 24 ಗಂಟೆಗಳಲ್ಲಿ 10,376 ಮಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ, ದೇಶದ ಹಾಟ್‌ಸ್ಪಾಟ್ ರಾಜ್ಯಗಳ ಪೈಕಿ ಆಂಧ್ರವು 3ನೇ ಸ್ಥಾನವನ್ನು ಆಕ್ರಮಿಸಿಕೊಳ್ಳುವಂತಾಗಿದೆ. ಮಹಾರಾಷ್ಟ್ರ ಹಾಗೂ ತಮಿಳುನಾಡು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದರೆ, ಈವರೆಗೆ ಮೂರನೇ ಸ್ಥಾನದಲ್ಲಿದ್ದ ದಿಲ್ಲಿ ಈಗ 4ನೇ ಸ್ಥಾನಕ್ಕಿಳಿದಿದೆ.
ದಿಲ್ಲಿಯ ಪರಿಸ್ಥಿತಿ ಸುಧಾರಣೆ: ಹಲವು ವಾರಗಳಿಂದಲೂ 3ನೇ ಸ್ಥಾನದಲ್ಲಿದ್ದ ದಿಲ್ಲಿಯಲ್ಲಿ ಈಗ ಪರಿಸ್ಥಿತಿ ಸುಧಾರಿಸಿದೆ. ಜೂನ್ ತಿಂಗಳಲ್ಲಿ ಪ್ರತಿ ದಿನ 4 ಸಾವಿರದಷ್ಟು ಪ್ರಕರಣ ಗಳಿಗೆ ಸಾಕ್ಷಿಯಾಗಿದ್ದ ದಿಲ್ಲಿಯಲ್ಲಿ ಈಗ ಸೋಂಕಿತರ ಸಂಖ್ಯೆ ದಿನಕ್ಕೆ 600ರ ಆಸುಪಾಸಿನಲ್ಲಿದೆ. ಕೋವಿಡ್ 19 ಸೋಂಕನ್ನು ನಿಯಂತ್ರಿಸಬೇಕೆಂದರೆ ಎಲ್ಲ ರಾಜ್ಯಗಳೂ ದಿಲ್ಲಿ ಮಾದರಿಯನ್ನು ಅನು ಸರಿಸಬೇಕು. ಹೆಚ್ಚು ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ, ಸೋಂಕನ್ನು ಬೇಗ ನಿಯಂತ್ರಿಸಬಹುದು ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ಶನಿವಾರ ತಿಳಿಸಿದ್ದಾರೆ.
24 ಗಂಟೆ; ದಾಖಲೆಯ 57,117 ಪ್ರಕರಣ
ದೇಶದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಪ್ರಕರಣಗಳು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ 57,117 ಮಂದಿಗೆ ಸೋಂಕು ದೃಢಪಟ್ಟಿದೆ. 764 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 17 ಲಕ್ಷ ದಾಟಿದ್ದರೆ, ಗುಣಮುಖ ಪ್ರಮಾಣ 11 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.