Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುತ್ತಿದೆ ಕೋವಿಡ್ 19 ಸಾವು!

02:06 AM Jul 11, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸಾವಿನ ಪ್ರಕರಣ ಮುಂದುವರಿಯುತ್ತಿದೆ.

Advertisement

ಅದರಲ್ಲಿಯೂ ಇಳಿ ವಯಸ್ಸಿನವರೊಂದಿಗೆ ಎಳೆ ವಯಸ್ಸಿನವರೂ ಮೃತಪಟ್ಟಿರುವುದು ಜಿಲ್ಲೆಯ ಮಟ್ಟಿಗೆ ಆತಂಕ ತಂದೊಡ್ಡುತ್ತಿದ್ದು, ಜನರು ಸೋಂಕು ಹರಡದಂತೆ ಮತ್ತಷ್ಟು ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಲ್ಲಿ ಎ. 19ರಿಂದ ಜು. 10ರ ವರೆಗೆ 38 ಮಂದಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಹೊರ ಜಿಲ್ಲೆಯವರಾದರೆ, ಉಳಿದ 33 ಮಂದಿ ದ.ಕ. ಜಿಲ್ಲೆಯವರೇ ಆಗಿದ್ದಾರೆ.

ಮೃತಪಟ್ಟವರ ಪೈಕಿ ಎಲ್ಲರೂ ದೀರ್ಘ‌ಕಾಲದ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ, ಕಿಡ್ನಿ ತೊಂದರೆ, ನ್ಯುಮೋನಿಯಾದಿಂದ ಬಳಲುತ್ತಿದ್ದವರು.

ಜೂ. 30ರ ವರೆಗೆ 13 ಇದ್ದ ಮೃತರ ಸಂಖ್ಯೆ ಬಳಿಕದ ಹತ್ತೇ ದಿನದಲ್ಲಿ 38ಕ್ಕೆ ತಲುಪಿದೆ. ಅದರಲ್ಲೂ ಶುಕ್ರವಾರ ಒಂದೇ ದಿನ ಎಂಟು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಮೃತಪಟ್ಟವರ ಪೈಕಿ ಕೋವಿಡ್ 19 ಸೋಂಕು ಬಾಧಿಸಿ ತೀವ್ರ ಉಸಿರಾಟದ ಸಮಸ್ಯೆ, ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌ ಸಮಸ್ಯೆ ಇದ್ದವರೇ ಬಹುತೇಕರು.

Advertisement

ಹಿರಿಯರ ಜತೆ 30-35 ವಯಸ್ಸಿನವರೂ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತರಲ್ಲಿ ಮಂಗಳೂರಿನವರೇ ಅಧಿಕ ಮಂದಿ. ವೇಣೂರು, ಬಂಟ್ವಾಳ, ಸುಳ್ಯ, ಮೂಡುಬಿದಿರೆ, ಸುರತ್ಕಲ್‌, ಉಳ್ಳಾಲದ ಮಂದಿ ಮೃತಪಟ್ಟವರಲ್ಲಿ ಸೇರಿದ್ದಾರೆ.

ಪ್ಲೇಗ್‌ ಮಹಾಮಾರಿಗೆ 2279 ಬಲಿಯಾಗಿದ್ದರು
ದ. ಕ. ಜಿಲ್ಲೆ ಸದ್ಯ ಕೋವಿಡ್ 19 ಸೋಂಕಿನಿಂದ ಕಂಗೆಟ್ಟಿದ್ದರೆ, 120 ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಪ್ಲೇಗ್‌ ಮಹಾಮಾರಿಯು  ಬಾಧಿಸಿತ್ತು. 1902ರಿಂದ 10 ವರ್ಷಗಳ ಕಾಲ ಪ್ಲೇಗ್‌ ಮಾರಿ ಜಿಲ್ಲೆಯನ್ನು ಬಿಡದೇ ಕಾಡಿದ್ದು, 2,279 ಮಂದಿ ಸಾವಿಗೀಡಾಗಿದ್ದರು ಎಂಬುದಾಗಿ ಮಹಾನಗರ ಪಾಲಿಕೆ ದಾಖಲೆಗಳು ಹೇಳುತ್ತವೆ.

ಸ್ವಯಂ ಲಾಕ್‌ಡೌನ್‌ಗೆ ಜನರ ಒಲವು
ಜಿಲ್ಲೆಯಲ್ಲಿ ಕೋವಿಡ್ 19 ಹರಡುತ್ತಿರುವ ವೇಗವನ್ನು ಗಮನಿಸಿದರೆ ಸ್ವಯಂ ಲಾಕ್‌ಡೌನ್‌ ವಿಧಿಸಿಕೊಂಡು ಸ್ವರಕ್ಷಣೆ ಕೈಗೊಳ್ಳುವುದೊಂದೇ ನಮ್ಮ ಮುಂದಿರುವ ಆಯ್ಕೆಯಾಗಿದೆ ಎಂದು ಜನರು ಭಾವಿಸಿದ್ದಾರೆ.

ಇದಕ್ಕಾಗಿ ರಸ್ತೆಗಿಳಿಯದೇ, ಅಂಗಡಿ ಮುಂಗಟ್ಟುಗಳನ್ನು ಅವಶ್ಯವಿದ್ದಲ್ಲಿ ಮಾತ್ರ ತೆರೆಯಲು ನಿರ್ಧರಿಸಿದ್ದಾರೆ. ಉಳ್ಳಾಲದ ಕೆಲವೆಡೆ, ಮೂಡುಬಿದಿರೆ, ಕಿನ್ನಿಗೋಳಿ, ಮೂಲ್ಕಿ, ಹಳೆಯಂಗಡಿ, ಬಂಟ್ವಾಳದ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಅರ್ಧ ದಿನ ಬಂದ್‌  ಜಾರಿಯಲ್ಲಿದೆ.

ಸ್ವರಕ್ಷಣೆ ಮಾಡಿಕೊಳ್ಳಿ
ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿನೇದಿನೇ ಜಾಸ್ತಿಯಾಗುತ್ತಿದೆ. ಜನ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಯೇ ಓಡಾಡುವುದನ್ನು ರೂಢಿಸಿಕೊಳ್ಳಬೇಕು. ಸದ್ಯ ಏರುತ್ತಿರುವ ಕೋವಿಡ್ 19 ಸಂಖ್ಯೆಯನ್ನು ನಿಯಂತ್ರಿಸಬೇಕಾದರೆ ಇದೊಂದೇ ಪರಿಹಾರ. ನಿಯಮಗಳನ್ನು ಪಾಲಿಸಿ, ಪ್ರತಿಯೊಬ್ಬರೂ ಸ್ವರಕ್ಷಣೆ ಮಾಡಿಕೊಳ್ಳಬೇಕು.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next