Advertisement

ವಸತಿ ಯೋಜನೆ ಅನುಷ್ಠಾನಕ್ಕೂ ಕೋವಿಡ್‌-19 ಕರಿನೆರಳು

09:26 PM Apr 18, 2020 | Sriram |

ವಿಶೇಷ ವರದಿ ಮಂಗಳೂರು: ಹಿಂದೆ ಅನುದಾನ ಬಿಡುಗಡೆಯಾಗದೆ ಬಾಕಿ ಯಾಗಿ ಬಳಿಕ ವೇಗ ಪಡೆದುಕೊಂಡಿದ್ದ ಸರಕಾರದ ವಸತಿ ಯೋಜನೆಗಳು ಪ್ರಸ್ತುತ ಸಂಪೂರ್ಣ ಸ್ತಬ್ಧಗೊಂಡಿವೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಸತಿ ನಿಗಮ ಚಟುವಟಿಕೆ ನಿಲ್ಲಿಸಿದೆ. ಅನುದಾನ ಬಿಡುಗಡೆಗೊಂಡ ಮನೆಗಳ ನಿರ್ಮಾಣವೂ ಅರ್ಧದಲ್ಲಿದೆ. ಮಳೆಗಾಲ ಹತ್ತಿರ ಬರುತ್ತಿರುವುದರಿಂದ ವಸತಿ ಅಪೇಕ್ಷಿತ ಫ‌ಲಾನುಭವಿಗಳು ಕಂಗಾಲಾಗಿದ್ದಾರೆ. ಖಾಸಗಿಯಾಗಿ ಮನೆ ನಿರ್ಮಿಸು ತ್ತಿರುವವರೂ ಸಂಕಷ್ಟದಲ್ಲಿದ್ದಾರೆ.

ಪದೇ ಪದೆ ಹಿನ್ನಡೆ
ಬಸವ ವಸತಿ, ಅಂಬೇಡ್ಕರ್‌ ವಸತಿ, ಪ್ರಧಾನ ಮಂತ್ರಿ ಆವಾಸ್‌ ಸೇರಿದಂತೆ ವಿವಿಧ ವಸತಿ ಯೋಜನೆಗಳಿಗೆ ಒಂದು ವರ್ಷದಿಂದ ಅನುದಾನ ಬಿಡುಗಡೆ ಯಾಗಿರಲಿಲ್ಲ. ಅಲ್ಪಸ್ವಲ್ಪ ಮೊತ್ತ ಬಿಡುಗಡೆಯಾದಾಗ ಮರಳಿನ ಕೊರತೆ ಉಂಟಾಯಿತು. ಅನಂತರ ಯೋಜನೆ ದುರುಪಯೋಗವಾಗಿದೆ ಎಂಬ ದೂರು ಬಂದದ್ದರಿಂದ “ವಿಜಿಲ್‌ ಆ್ಯಪ್‌’ ತರಲಾಯಿತು.

2.60 ಲಕ್ಷ ಮನೆಗಳು ಅನ್‌ಬ್ಲಾಕ್‌
ಬ್ಲಾಕ್‌ ಆಗಿದ್ದ ಮನೆಗಳನ್ನು ಒಂದು ಬಾರಿಗೆ ಅನ್‌ಬ್ಲಾಕ್‌ ಮಾಡುವ ಅವಕಾಶ ಒದಗಿಸಿದ ಬಳಿಕ ರಾಜ್ಯದಲ್ಲಿ ಸುಮಾರು 2.60 ಲಕ್ಷ ಮನೆಗಳಿಗೆ ಮೊತ್ತ ಬಿಡುಗಡೆ ಪ್ರಕ್ರಿಯೆ ಚಾಲನೆ ಪಡೆದಿತ್ತು. ಆದರೆ ಈಗ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಚಟುವಟಿಕೆಗಳು ನಿಂತಿವೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,640 ಮಂದಿ ಫ‌ಲಾನುಭವಿಗಳ ಮನೆಗಳ ಪೈಕಿ 1,557 ಮನೆಗಳ ಜಿಪಿಎಸ್‌ ಮುಗಿ ಸಲಾಗಿದ್ದು, ಅನೇಕ ಮಂದಿಗೆ ಕೆಲವು ಹಂತಗಳ ಮೊತ್ತ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಬಾಕಿಯಾಗಿದೆ. ದ.ಕ. ಜಿಲ್ಲೆಯಲ್ಲಿ 2,000ಕ್ಕೂ ಅಧಿಕ ಮನೆಗಳ ನಿರ್ಮಾಣದ ಮೇಲೆ ಲಾಕ್‌ಡೌನ್‌ ಪರಿಣಾಮ ಉಂಟಾಗಿದೆ.

Advertisement

ಎ. 20ರ ಬಳಿಕ ನಿಗಮ ಕಾರ್ಯನಿರ್ವಹಣೆ ನಿರೀಕ್ಷೆ
ಎ. 20ರ ಅನಂತರ ನಿಗಮದ ಸರ್ವರ್‌ ಕಾರ್ಯ ಪುನರಾರಂಭಗೊಳಿಸುವ ನಿರೀಕ್ಷೆ ಇದೆ ಎಂದು ವಸತಿ ಯೋಜನೆ ವಿಭಾಗ ಮತ್ತು ವಸತಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.50ರಷ್ಟು ಮಾತ್ರ ಪ್ರಗತಿ
ಬಸವ ವಸತಿ, ಅಂಬೇಡ್ಕರ್‌ ವಸತಿ ಮತ್ತು ವಾಜಪೇಯಿ ವಸತಿ ಯೋಜನೆಯಡಿ 2.24 ಲಕ್ಷ ಮನೆಗಳು ನಿರ್ಮಾಣಗೊಳ್ಳಬೇಕಿದೆ.

ಇತ್ತೀಚೆಗೆ ಅನ್‌ಬ್ಲಾಕ್‌ ಮಾಡಲಾದ 2.60 ಲಕ್ಷ ಮನೆಗಳ ಪೈಕಿ ಸುಮಾರು 60 ಸಾವಿರ ಮನೆಗಳು ಮಾತ್ರ ಪ್ರಗತಿಯಲ್ಲಿವೆ. 2.19 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಂಡು ಮೊತ್ತ ಬಿಡುಗಡೆಗೆ ಬಾಕಿ ಇದೆ. ಪ್ರವಾಹ ಪೀಡಿತರಿಗಾಗಿ 60 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣ ಪೂರ್ಣಗೊಳ್ಳಬೇಕಿದೆ. ಈ ಎಲ್ಲ ಯೋಜನೆಗಳಿಗೆ ಸುಮಾರು 5 ಸಾವಿರ ಕೋ.ರೂ. ಅಂದಾಜಿಸಲಾಗಿದ್ದು, ಸದ್ಯ ನಿಗಮಕ್ಕೆ ಮಂಜೂರಾಗಿರುವ ಮೊತ್ತ ಕಡಿಮೆ. ಲಾಕ್‌ಡೌನ್‌ನಿಂದಾಗಿ ಉಳಿದ ಅನುದಾನ ಮಂಜೂರಾಗಬಹುದೇ ಎಂಬ ಆತಂಕ ಇದೆ.

ಶೀಘ್ರ ಯೋಜನೆಗಳ ಅನುಷ್ಠಾನ
ನಿಗಮದ ಚಟುವಟಿಕೆಗಳು ಆರಂಭವಾದ ಅನಂತರ ಆದಷ್ಟು ಶೀಘ್ರ ಯೋಜನೆಗಳ ಅನುಷ್ಠಾನಕ್ಕೆ ಗಮನ ನೀಡಲಾಗುವುದು.
 - ಡಾ | ಸೆಲ್ವಮಣಿ ಆರ್‌.,ಸಿಇಒ, ದ.ಕ.ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next