ಬೆಂಗಳೂರು: ಕೋವಿಡ್ 19 ವೈರಸ್ ಸೋಂಕು ಹರಡುತ್ತದೆ ಎಂಬ ಆತಂಕದಲ್ಲಿ ಜನರು ಜೀವನ ಸಾಗಿಸುತ್ತಿದ್ದು, ಕೆಲವರಿಗೆ ಕೊರೊನಾ ಮನರಂ ಜನೆಯ ವಸ್ತುವಾಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ 19 ಸಂಬಂಧ ಜನರಲ್ಲಿ ಜಾಗೃತಿಯ ಸಂದೇಶಗಳನ್ನು ರವಾನಿಸುವುದರ ಜತೆಗೆ ಕೆಲ ಹಾಸ್ಯ ತುಣುಕು ಗಳನ್ನು ಕೊರೊನಾಕ್ಕೆ ಹೋಲಿಕೆಯಾಗುವಂತೆ ಸಿದ್ಧಪಡಿಸಿ ಹರಿಬಿಡುತ್ತಿದ್ದಾರೆ.
ವೈರಸ್ ಸೋಂಕು ಹರಡುವ ಹಿನ್ನೆಲೆ ಎಲ್ಲ ಕಂಪನಿಗಳು, ಸರ್ಕಾರಿ ಕಚೇರಿಗಳಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಲಾಗಿದ್ದು, ಯಾರೂ ಕೂಡ ಹೊರಬಾರದಂತೆ ನಿರ್ಬಂಧ ಹೇರಲಾಗಿದೆ. ಮನೆಯಲ್ಲಿರುವ ಜನರು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಬಿಜಿಯಾಗಿದ್ದು, ಅದರಲ್ಲಿ ಟ್ರೋಲ್, ಜೋಕ್‌ಗಳಿಗೆ ಸ್ಪಂದಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಹೆಚ್ಚು ಟ್ರೋಲ್ ಆಗುತ್ತಿದ್ದರು. ಈಗ ಕೋವಿಡ್ 19 ಟ್ರೋಲ್ ವಸ್ತುವಾಗಿದ್ದು, ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟ್ರಾಗ್ರಾಮ್ ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮನರಂಜನೆ ವಸ್ತುವಂತೆ ಬಿಂಬಿಸುತ್ತಿದ್ದಾರೆ. ಇದಕ್ಕೆ ಕೆಲವರು ಬೆಂಬಲ ಸೂಚಿಸಿದ್ದರೂ, ಇನ್ನೂ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟ್ರೋಲಿಗರಿಗೆ ಯುಗಾದಿ ಹಬ್ಬ: ಕೋವಿಡ್ 19 ಹಿನ್ನೆಲೆ ದೇಶವೇ ಲಾಕ್‌ಡೌನ್ ಆಗಿದ್ದು, ಯುಗಾದಿ ಹಬ್ಬದ ಹಿನ್ನೆಲೆ ಟ್ರೋಲಿಗರು ‘ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ’ ಎಂಬ ಹಾಡನ್ನು ಸಂಯೋಜಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಇನ್ನು ರಸ್ತೆಗಿಳಿದರೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವುದನ್ನು ಕೆಲವರು “ಬಿಸಿ ಬಿಸಿ ಕಜ್ಜಾಯ, ಬಿಸಿ ಬಿಸಿ ಕಜ್ಜಾಯ.. ಇಗೋ ತಿನ್ನು’ ಎಂಬ ಚಿತ್ರಗೀತೆಯನ್ನು ವಿಡಿಯೋಗೆ ಪೋಣಿಸಿ ಹರಿಬಿಟ್ಟಿದ್ದಾರೆ. ಕೆಲವರು ಟಿಕ್‌ಟಾಕ್‌ನ ವಿಡಿಯೋ ಹರಿಬಿಟ್ಟು ಕೋವಿಡ್ 19 ಮನೋರಂಜನೆಯ ವಸ್ತುವನ್ನಾಗಿಸಿದ್ದಾರೆ. ಇದರ ನಡುವೆ ಮುನ್ನೆಚ್ಚರಿಕಾಕ್ರಮಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.
ನಿಯಮ ಉಲ್ಲಂಘಿಸಿದರೆ ಬಸ್ಕಿ, ಕಪ್ಪೆ ಜಿಗಿತ : ರಾಜ್ಯದ ವಿವಿಧೆಡೆ ಪೊಲೀಸರು ಲಾಠಿ ರುಚಿ ನೀಡವುದರ ಜತೆಗೆ ರಸ್ತೆಬದಿ ಕಸ ಗುಡಿಸುವುದು ಸೇರಿದಂತೆ ತರಾವೆರಿ ಶಿಕ್ಷೆ ನೀಡುತ್ತಿದ್ದಾರೆ. ಸದ್ಯ ಮಾರ್ಷಲ್‌ಗಳು ರಸ್ತೆಗೆ ಬರುವವರ ಮೇಲೆ ಕಣ್ಣಿಟ್ಟಿದ್ದು, ಶಿವಾಜಿನಗರ ಸೇರಿದಂತೆ ಮತ್ತಿತರೆಡೆ ಅನವಶ್ಯಕವಾಗಿ ರಸ್ತೆಗಳಲ್ಲಿ ನಡೆದಾಡುತ್ತಿದ್ದವರಿಂದ ಬಸ್ಕಿ ಹೊಡೆಸಿದ್ದಾರೆ. ಅಲ್ಲದೆ, ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದವರಿಂದ ಕಪ್ಪೆ ರೀತಿ ಜಂಪ್ ಮಾಡುವಂತೆ ಮಾರ್ಷಲ್ ಗಳು ಜಂಪ್ ಮಾಡಿ ತೋರಿಸಿ, ಜಂಪ್ ಮಾಡಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದ ತಮಾಷೆ ಸಂದೇಶಗಳು :
- ದಯವಿಟ್ಟು ಪೊಲೀಸರು ರಸ್ತೆಯಲ್ಲಿ ಹೋಗೋ ಗಂಡಸರಿಗೆ ಹೊಡೆಯುವ ವಿಡಿಯೋ ವಾಟ್ಸಪ್‌ನಲ್ಲಿ ಹಾಕಬೇಡಿ. ಅದನ್ನು ನೋಡಿದ ಹೆಂಗಸರು ತಮ್ಮ ಗಂಡನನ್ನು ಬೇಕಂತಲೇ ತರಕಾರಿ, ಹಾಲು, ಮೊಸರು ತರಲು ಕಳಿಸುತ್ತಿರುವ ವರದಿಗಳು ಬಂದಿವೆ!
- ಹಿಂದೆ ರಾಮಾಯಣ ನೋಡೋಕೆ ಜನ ಮನೆ ಸೇರುತ್ತಿದ್ದರು. ಈಗ ಜನ ಮನೇಲಿ ದ್ದಾರೆ ಅಂತ ರಾಮಾಯಣ ಹಾಕ್ತಿದ್ದಾರೆ!!
- ನಿಮಗಿದು ಗೊತ್ತಾ? ಬಿಸ್ಕಿಟ್‌ನಲ್ಲಿ 24ತೂತುಗಳಿವೆ. ಮನ್ಯಾಗ ಕುಂತು ಏನ್ ಮಾಡ್ತಿರಿ ಹೊಸ ಹೊಸ ವಿಷಯಗಳನ್ನು ಕಂಡು ಹಿಡಿಯಿರಿ.
- ಅವ್ರು ಸತ್ರೆ ರಜಾ ಸಿಗುತ್ತೆ, ಇವ್ರು ಸತ್ರೆ ರಜಾ ಸಿಗುತ್ತೆ , ಅಂತ ಕಾಯೋ ದಿನಗಳೆಲ್ಲ ಹೋಯಿತು. ಈಗ ನಾವ್ ಸಾಯ್ದೆ ಇರೋಕೆ 21 ದಿನ ರಜೆ ಕೊಟ್ಟಿದ್ದಾರೆ. ಭಗವಂತ ಏನ್ ಕಲಿಯುಗಪ್ಪ ಇದು!