ಹಾಸನ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ಚಿಕಿತ್ಸಾ ವ್ಯವಸ್ಥೆಯೂ ಸದಾ ಸನ್ನದ್ಧವಾಗಿರ ಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮೈಸೂರು ಮಿನರಲ್ಸ್ ವ್ಯವಸ್ಥಾಪಕ ನಿರ್ದೇಶಕ ನವೀನ್‌ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಚಿಕಿತ್ಸೆಗೆ ಬೇಕಾಗಿರುವ ಮೂಲ ಸೌಕರ್ಯ ಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಪೂರೈಸಲಾಗುವುದು. ಹಾಸನ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ 19 ತಪಾಸಣೆ ಹಾಗೂ ಚಿಕಿತ್ಸೆಗೆ ಸುಸಜ್ಜಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ವೆಂಟಿಲೇಟರ್‌ಗಳ ಕೊರತೆ: ಜಿಲ್ಲಾ ಆಸ್ಪತ್ರೆಯಲ್ಲಿ 400 ಹಾಸಿಗೆಗಳು ಸಿದ್ಧವಾಗಿದ್ದರೂ ಕೇವಲ 18 ವೆಂಟಿಲೇಟರ್‌ಗಳು ಮಾತ್ರ ಇವೆ. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ ಹಿನ್ನೆಲೆಯಲ್ಲಿ ಸೋಂಕಿತರನ್ನು ಹಾಸನ ಆಸ್ಪತ್ರೆಗೆ ದಾಖಲಿಸಿ. ಅನಿವಾರ್ಯ ತುರ್ತು ಸಂದರ್ಭ ಎದುರಾದಲ್ಲಿ ಮಾತ್ರ ತಾಲೂಕು ಆಸ್ಪತ್ರೆಗಳಲ್ಲಿನ ವೆಂಟಿಲೇಟರ್‌ಗಳನ್ನು ಹಾಸನದ ಕೋವಿಡ್ 19 ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಈಗಾಗಲೇ ತಾಂತ್ರಿಕ ಸಿದ್ಧತೆ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದು ಸೂಚನೆ ನೀಡಿದರು.
ಪಿಪಿಇ ಕಿಟ್, ಮಾಸ್ಕ್ ಒದಗಿಸಲು ಕ್ರಮ: ಜಿಲ್ಲೆಗೆ ಅಗತ್ಯ ಪ್ರಮಾಣದ ಪಿಪಿಇ ಕಿಟ್ ಹಾಗೂ ಮಾಸ್ಕ್ಗಳನ್ನು ಒದಗಿಸಲು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಎಲ್ಲಾ ವೈದ್ಯರು ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂದ ಅವರು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಕೋವಿಡ್ 19 ನಿಯಂತ್ರಣ ಒಂದು ಸಾಮಾಜಿಕ ಹೊಣೆಗಾರಿಕೆ ಅಗತ್ಯ ಪ್ರತಿಯೊಬ್ಬ ನಾಗರಿಕನೂ ಪ್ರಜ್ಞಾ ಪೂರ್ವಕವಾಗಿ ಸ್ವಯಂ ನಿಯಂತ್ರಣ ಹೇರಿಕೊಂಡು ಸಹಕರಿಸಬೇಕು ಎಂದರು.
ಅಗತ್ಯವಿದ್ದರೆ ಖಾಸಗಿ ವೈದ್ಯರ ಬಳಕೆ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕ ಸೇವೆ ನೀಡಬೇಕು ಅನಿವಾರ್ಯವಾದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಸರ್ಕಾರ ಸೇವೆಗೆ ಬಳಸಬಹುದು ಎಂದ ಅವರು, ದಿನಸಿ, ತರಕಾರಿ ಹಾಗೂ ಔಷಧ ಮಾರಾಟ ಹೊರತುಪಡಿಸಿ ಬಟ್ಟೆ ಅಂಗಡಿ ಮತ್ತು ತುರ್ತಾಗಿಲ್ಲದ ಇತರ ಅಂಗಡಿಗಳು ತರೆಯ ಕೂಡದು. ತೆರೆದಿರುವುದನ್ನು ತಾವು ಗಮನಿಸಿ ಅವುಗಳನ್ನು ಸೀಜ್ ಮಾಡಿ ಎಂದು ತಾಕೀತು ಮಾಡಿದರು. ಜಿಲ್ಲಾಧಿಕಾರಿ ಆರ್.ಗಿರೀಶ್ ಜಿಲ್ಲೆಯಲ್ಲಿ ಲಾಕ್‌ಡೌನ್ ವ್ಯವಸ್ಥೆ ನಿರ್ವಹಣೆಗೆ ದಿನಸಿ, ತರಕಾರಿಗಳ ಮಾರಾಟ ಹಾಗೂ ಸಾಗಣೆಗೆ ಮಾಡಲಾಗಿರುವ ವ್ಯವಸ್ಥೆಗಳು ವೈದ್ಯಕೀಯ ಸೌಲಭ್ಯಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಜಿಲ್ಲೆಗೆ ಬಂದ ವಿದೇಶಿಯರು ವಿವಿಧ ರಾಜ್ಯದ ಪ್ರಯಾಣಿಕರು, ಅವರ ಸಧ್ಯದ ಸ್ಥಿತಿಗತಿ ಕುರಿತು ವಿವರಿಸಿದರು.
ಜಿಪಂ ಸಿಇಒ ಬಿ.ಎ.ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್, ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ಅವರು ಕೊರೊನಾ ಚಿಕಿತ್ಸಾ ಸಿದ್ಧತೆಯ ವಿವರ ನೀಡಿದರು