ಭಟ್ಕಳ: ಕೋವಿಡ್ 19 ವೈರಸ್ ಹರಡದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪಟ್ಟಣದಲ್ಲಿ ತುರ್ತು ಕ್ರಮ ಕೈಗೊಂಡಿದ್ದಾರೆ. ವೈರಸ್ ಪತ್ತೆಯಾದ ಇಬ್ಬರ ಕುಟುಂಬದವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅವರೆಲ್ಲರಿಗೂ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.
ಎರಡೂ ಮನೆವರು ಇರುವ ಪ್ರದೇಶದ ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿನ ಜನರು ಹೊರಕ್ಕೆ ಹೋಗುವುದು ಹಾಗೂ ಈ ಪ್ರದೇಶಕ್ಕೆ ಬೇರೆ ಪ್ರದೇಶದ ಜನರು ಬರುವುದನ್ನು ಕೂಡಾ ನಿಯಂತ್ರಿಸಲಾಗಿದ್ದು, ಜಿಲ್ಲಾಡಳಿತವು ಅಗ್ನಿಶಾಮಕ ದಳದ ಸಹಾಯದೊಂದಿಗೆ ಮನೆಗಳ ಸುತ್ತಮುತ್ತ ಫ್ಯಾಮಿಗೇಶನ್ ಮಾಡಿದೆ.
ಹಗಲು ರಾತ್ರಿಯೆನ್ನದೇ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸಂಶಯಿತರ ಗಂಟಲು ಹಾಗೂ ರಕ್ತ ಮಾದರಿ ತೆಗೆಯುತ್ತಿದ್ದ ವೈದ್ಯರಿಬ್ಬರು ದಣಿದಿದ್ದರಿಂದ ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ಅವರ ಹಾಗೂ ಇತರ ಸಿಬ್ಬಂದಿ ಕಫ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.
ವೈದ್ಯರೊಬ್ಬರಿಗೆ ಯಾವುದೇ ಸೋಂಕು ಇಲ್ಲ ಎನ್ನುವ ವರದಿ ಬಂದಿದ್ದು, ಇನ್ನಷ್ಟೇ ಉಳಿದವರ ಕುರಿತು ವರದಿ ಬರಬೇಕಾಗಿದೆ. ಸದಾ ಆಸ್ಪತ್ರೆಯಲ್ಲಿದ್ದು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದ ಸಮಾಜ ಸೇವಕರೊಬ್ಬರು ಕುಸಿದು ಬಿದ್ದ ಪರಿಣಾಮ ಅವರಿಗೆ ತುರ್ತು ಚಿಕಿತ್ಸೆ ನೀಡಿ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ ಎನ್ನಲಾಗಿದೆ.
ಆರೋಗ್ಯ ಇಲಾಖೆ ಕಾರ್ಯಕರ್ತರು ಈಗಾಗಲೇ ಪಟ್ಟಣದ ಹೆಚ್ಚಿನ ಮನೆಗಳ ಸರ್ವೇ ಕಾರ್ಯ ಮುಗಿಸಿದ್ದು, ಎಲ್ಲ ವಿವರಗಳನ್ನು ಮನೆಯಲ್ಲಿರುವವರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿದ್ದಾರೆ.