ಮಣಿಪಾಲ: ಕೋವಿಡ್-19 ಸೋಂಕನ್ನು ಸಂಹರಿಸುವ ಲಸಿಕೆಗಾಗಿ ವಿಶ್ವದ ಸಂಶೋಧಕರ ತಂಡೋಪತಂಡ ನಿರತವಾಗಿರುವಾಗಲೇ ಚೀನವು ಕೋವಿಡ್19 ನಿರೋಧಕ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ.
ಬೀಜಿಂಗ್ ಮೂಲದ ಸೈನಾವ್ಯಾಕ್ ಬಯೋಟೆಕ್ ಕೇಂದ್ರ ಇನ್ಆಕ್ಟಿವೇಟೆಡ್ ಕೋವಿಡ್- 19 ನಿರೋಧಕ ಚುಚ್ಚುಮದ್ದನ್ನು ಸಿದ್ಧಪಡಿಸಿದ್ದು, ಪ್ರಾಯೋಗಿಕವಾಗಿ ಈ ರೋಗನಿರೋಧಕ ಚುಚ್ಚುಮದ್ದು ಸಫಲವಾಗಿದೆ ಎಂದು ತಿಳಿಸಿದೆ. ಮಂಗಗಳಿಗೆ ಈ ಚುಚ್ಚುಮದ್ದನ್ನು ನೀಡಲಾಗಿತ್ತು. ಇದೀಗ ಅದು ಯಶಸ್ವಿಯಾಗಿದ್ದು, ಸೋಂಕನ್ನು ಮಣಿಸುವ ಭರವಸೆ ಮೂಡಿಸಿದೆ ಎಂದಿದೆ.
ಹೆಚ್ಚಿನ ಪ್ರಮಾಣದ ಚುಚ್ಚುಮದ್ದು ನೀಡಿದ್ದ ಮಂಗಗಳ ಶ್ವಾಸಕೋಶದಲ್ಲಿ ಒಂದು ವಾರದ ಬಳಿಕ ಕೋವಿಡ್-19 ವೈರಾಣುಗಳು ಇರಲಿಲ್ಲ. ಈ ಚುಚ್ಚುಮದ್ದು ನೀಡದ ಮಂಗಗಳು ಸೋಂಕು ತಗುಲಿಸಿಕೊಂಡು, ತೀವ್ರ ಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾದವು ಎಂದು ವಿವರಿಸಿದೆ.
ರೋಗನಿರೋಧಕ ಸಂಶೋಧಕರು ಮೊದಲಿಗೆ ಮಂಗಗಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಿ, ಮೂರು ವಾರಗಳ ಬಳಿಕ ಅವುಗಳನ್ನು ಕೋವಿಡ್ ಸೋಂಕಿನ ವಾತಾವರಣದಲ್ಲಿ ಬಿಟ್ಟಿದ್ದರು. ಅವುಗಳಿಗೆ ನೀಡಲಾಗಿದ್ದ ರೋಗನಿರೋಧಕ ಚುಚ್ಚುಮದ್ದು ಕೋವಿಡ್ -19 ವೈರಾಣು ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು (ಆಯಂಟಿಬಾಡೀಸ್) ದೇಹದಲ್ಲಿ ಉತ್ಪತ್ತಿ ಮಾಡಿದ್ದು, ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳ ವಿರುದ್ಧವೂ ಹೋರಾಡಬಲ್ಲವು ಎಂದು ಸೈನ್ಸ್ ಮ್ಯಾಗಝೀನ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.