ಲಂಡನ್: ಕೋವಿಡ್ ಸೃಷ್ಟಿಸಿರುವ ಅವಾಂತರದಿಂದ ಮನುಕುಲದಿಂದ ಹಿಡಿದು ಪ್ರತಿಯೊಂದು ಜೀವ ಸ್ತರಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಅಲ್ಲದೇ ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕುಳಿತು, ವ್ಯಾಯಾಮ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದ್ದು, ಹಲವರಿಗೆ ಬೊಜ್ಜಿನ ಸಮಸ್ಯೆ ಎದುರಾಗಿದೆ.
ಇದೀಗ ಈ ಸಮಸ್ಯೆ ಕೇವಲ ಮನುಷ್ಯರಿಗಲ್ಲದೇ ಪ್ರಾಣಿಗಳಿಗೂ ಎದುರಾಗಿದ್ದು, ಅದರಲ್ಲಿಯೂ ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ ಬೊಜ್ಜಿನ ಸಮಸ್ಯೆ ಉಂಟಾಗಿದೆ.
ಸುಮಾರು 200 ವರ್ಷಗಳ ಇತಿಹಾಸವಿರುವ ಲಂಡನ್ ಮೃಗಾಲಯವು 2ನೇ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ ಮುಚ್ಚಲ್ಪಟ್ಟಿದ್ದು, ಅಲ್ಲಿನ ಪ್ರಾಣಿಗಳ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಾಗಿವೆ.
ಈ ಹಿನ್ನೆಲೆಯಲ್ಲಿಯೇ ಲಾಕ್‌ಡೌನ್ ವೇಳೆಯಲ್ಲಿ ಪ್ರಾಣಿಗಳ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಗಳುಆಗಿವೆ ಎಂದು ತಿಳಿಯಲು 19 ಸಾವಿರ ಪ್ರಾಣಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಅವುಗಳ ತೂಕವನ್ನು ಮಾಡಲಾಗಿದೆ. ತಪಾಸಣೆಗೆ ಒಳಪಡಿಸಿದ ವೇಳೆ ಪ್ರಾಣಿಗಳ ಪೈಕಿ ಹೆಚ್ಚಿನವು ದೈಹಿಕ ಚಟುವಟಿಕೆ ಇಲ್ಲದೇ ಬೊಜ್ಜು ಬೆಳೆಸಿಕೊಂಡಿರುವುದು ಸಿಬಂದಿಗೆ ತಿಳಿದುಬಂದಿದ್ದು, ಆರೋಗ್ಯದಲ್ಲಿಯೂ ವ್ಯತ್ಯಯವಾಗಿದೆ ಎಂದು ಹೇಳಲಾಗಿದೆ.
ಸೋಂಕಿನ ಭೀತಿಯಿಂದ ಪ್ರಾಣಿಗಳಿಗೆ ಯಾವುದೇ ದೈಹಿಕ ಚಟುವಟಿಕೆ ಯನ್ನು ಮಾಡಿಸುತ್ತಿರಲಿಲ್ಲ. ಹಲವು ಪ್ರಾಣಿಗಳನ್ನು ಪಂಜರದಿಂದ ಕೂಡ ಹೊರಕ್ಕೆ ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದ್ದಲ್ಲಿಯೇ ತಿಂದು, ಪ್ರಾಣಿಗಳು ಕೊಬ್ಬಿ ಹೋಗಿರುವುದಾಗಿ ಮೃಗಾಲಯ ಸಿಬಂದಿ ಹೇಳಿದ್ದು. ಈ ನಿಟ್ಟಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಚಿಂತೆ ಕಾಡುತ್ತಿದೆ ಎಂದು ಅಲ್ಲಿನ ಸಿಬಂದಿಯೊಬ್ಬರು ಕಳವಳವ್ಯಕ್ತಪಡಿಸಿದ್ದಾರೆ.
ಇನ್ನು 3 ತಿಂಗಳ ಸುದೀರ್ಘ ಲಾಕ್ ಡೌನ್ ಬಳಿಕ ಜೂನ್ 15ರಿಂದ ಸೀಮಿತ ಮಟ್ಟದಲ್ಲಿ ಮೃಗಾಲಯವನ್ನು ಪುನರಾರಂಭಗೊಳಿಸಿದ್ದು, ಆದಾಯದ ಕೊರತೆಯ ಕಾರಣ ಲಂಡನ್ ಮೃಗಾಲಯವು ಗಂಭೀರವಾದ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಮೃಗಾಲಯದ ಉಳಿವಿಗೆ ಸಾರ್ವಜನಿಕ ದೇಣಿಗೆಯನ್ನು ಪದಾಧಿಕಾರಿಗಳು ಕೋರಿದ್ದಾರೆ.