ಚಿಕ್ಕಬಳ್ಳಾಪುರ: ಇದುವರೆಗೂ ಜಿಲ್ಲೆಯ ಗೌರಿ ಬಿದನೂರು ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದ ಮಹಾಮಾರಿ ಕೋವಿಡ್ 19 ಸೋಂಕು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೂ ಹಬ್ಬಿದ್ದು, ಪ್ರವಾಸದ ಹಿನ್ನೆಲೆ ಇರದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ತಲ್ಲಣ ಮೂಡಿಸಿದೆ.
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಗಂಟಲು ದ್ರಾವಣ ಮಾದರಿಯನ್ನು ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
6 ಮಂದಿ ಸಂಪರ್ಕ: ನಗರದ 17ನೇ ವಾರ್ಡ್‌ನ ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿರುವ ಆತನ ಪತ್ನಿ, ಮಕ್ಕಳು ಸೇರಿ ಒಟ್ಟು ಆರು ಮಂದಿ ಪೈಕಿ ಐದು ಮಂದಿಯನ್ನು ಮಾತ್ರ ಜಿಲ್ಲಾ ಆರೋಗ್ಯ ಇಲಾಖೆ ನಗರದ ಹಳೆ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದು ಒಬ್ಬ ವ್ಯಕ್ತಿಯನ್ನು ಮಾತ್ರ ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರ ಎಲ್ಲಾ ಗಂಟಲು ದ್ರಾವಣ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು ವರದಿ ಬರಬೇಕಿದೆ.
8 ಮಂದಿ ಚೇತಕರಿಗೆ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 13ಕ್ಕೆ ಏರಿದ್ದು ಈಗಾಗಲೇ ಗೌರಿಬಿದನೂರಿನ 70 ವರ್ಷದ ವೃದ್ಧೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿಸೋಂಕಿನಿಂದ ಮೃತಪಟ್ಟಿದ್ದಳು. ಜೊತೆಗೆ ಜಿಲ್ಲೆಯಲ್ಲಿ ಮೊದಲು ಕಂಡು ಬಂದ ಸೋಂಕಿತ ವ್ಯಕ್ತಿ ಸೇರಿ ಇದುವರೆಗೂ 8 ಮಂದಿ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದು ಸಮಾಧಾನದ ಸಂಗತಿ ನಡುವೆ ಗೌರಿಬಿದನೂರಿಗೆ ಸೀಮಿತವಾಗಿದ್ದ ಸೋಂಕು ಜಿಲ್ಲಾ ಕೇಂದ್ರಕ್ಕೂ ಹಬ್ಬಿರುವುದು ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ.
17ನೇ ವಾರ್ಡ್ ಸೀಲ್‌ಡೌನ್ : ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ್‌ನ ನಿವಾಸಿಯೊಬ್ಬರಿಗೆ ಕೋವಿಡ್ 19 ಸೋಂಕು ಪತ್ತೆಯಾದ ಬೆನ್ನಲ್ಲೇ ಜಿಲ್ಲಾಡಳಿತ ಆ ವಾರ್ಡನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದೆ. ಮಂಗಳವಾರ ವ್ಯಕ್ತಿಯಲ್ಲಿ ಸೋಂಕು ದೃಢವಾಗುತ್ತಿದ್ದಂತೆ ಅವರ ಸಂಪರ್ಕದಲ್ಲಿದ್ದ ಇತರರನ್ನು ಕ್ವಾರಂಟೈನ್‌ಗೆ ಒಳಪಡಿಸಿರುವ ಜಿಲ್ಲಾಡಳಿತ ವಾರ್ಡ್‌ನ ಎಲ್ಲಾ ನಾಗರಿಕರಿಗೆ ಮನೆಗಳಿಂದ ಹೊರಬರದಂತೆ ಸೂಚನೆ ನೀಡಿದೆ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಕಲ್ಪಿಸುವ ಭರವಸೆ ನೀಡಿದೆ. ಸ್ಥಳೀಯ ನಗರಸಭೆ ಕೂಡ ಸೋಂಕು ಪತ್ತೆಯಾಗಿರುವ ಪ್ರದೇಶದಲ್ಲಿ ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಒತ್ತು ಕೊಟ್ಟಿದೆ.
ಮೇ 3 ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ.ಚಿಕ್ಕಬಳ್ಳಾಪುರ ನಗರದ 17 ನೇ ವಾರ್ಡ್‌ನಲ್ಲಿ ಕೋವಿಡ್ 19 ಸೊಂಕು ಪ್ರಕರಣ ದಾಖಲಾಗಿದ್ದು, ಈ ವಾರ್ಡನ್ನು ಸೀಲ್ ಡೌನ್ ಮಾಡಿ. ಪ್ರತಿ ಮನೆ ಮನೆಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಸರ್ಕಾರದ ಇಲಾಖೆಗಳ ವತಿಯಿಂದ ಸರಬರಾಜು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
–ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು