Advertisement

ರಾಜ್ಯದಲ್ಲಿ ಕೋವಿಡ್‌ ಆತಂಕ ಸಂಘಟಿತ ಪ್ರಯತ್ನ ಮುಖ್ಯ

12:49 AM Jun 29, 2020 | Hari Prasad |

ಕರ್ನಾಟಕದಲ್ಲಿ ಕೋವಿಡ್‌-19 ಪ್ರಕರಣಗಳು ಏರಿಕೆಯಾಗುತ್ತಲೇ ಇವೆ.

Advertisement

ಈ ಕಾರಣಕ್ಕಾಗಿಯೇ ಸರಕಾರ, ಜುಲೈ 5ರಿಂದ ಮುಂದಿನ ನಾಲ್ಕು ರವಿವಾರಗಳಂದು ಪೂರ್ಣ ದಿನ ಲಾಕ್‌ಡೌನ್‌ ಘೋಷಿಸಿದೆ.

ಈ ರೀತಿಯ ನಿರ್ಧಾರ ಅಗತ್ಯವಾಗಿತ್ತು, ಅದರಲ್ಲೂ ಜೂನ್‌ ತಿಂಗಳ 3ನೇ ವಾರದಿಂದ ಕರ್ನಾಟಕದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆ ಕಂಡು ಬಂದಿದೆ.

ಜೂನ್‌ 1ರಿಂದ ಜೂನ್‌ 27ರ ನಡುವೆಯೇ 8700ಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇದೇ ಅವಧಿಯಲ್ಲೇ ಚೇತರಿಸಿಕೊಂಡವರ ಪ್ರಮಾಣವೂ ಉತ್ತಮವಾಗಿದೆಯಾದರೂ, ಸವಾಲು ಇಷ್ಟಕ್ಕೇ ಮುಗಿದಿದೆ ಎಂದೇನೂ ಇಲ್ಲ.

ಇದುವರೆಗೂ ರಾಜ್ಯದ 3 ಜಿಲ್ಲೆಗಳಲ್ಲಿ, ಅಂದರೆ ಬೆಂಗಳೂರು, ಕಲಬುರಗಿ ಹಾಗೂ ಉಡುಪಿಯಲ್ಲಿ ಸಹಸ್ರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಈ ಜಿಲ್ಲೆಗಳಲ್ಲೇ 5 ಸಾವಿರಕ್ಕೂ ಅಧಿಕ ಜನರಿದ್ದಾರೆ.

Advertisement

ಆದಾಗ್ಯೂ, ಇವರಲ್ಲಿ ಚೇತರಿಸಿಕೊಂಡವರ ಪ್ರಮಾಣವೂ ಗಣನೀಯವಾಗಿದೆ ಎನ್ನುವುದನ್ನು ಉಲ್ಲೇಖೀಸಲೇಬೇಕು. ಆದರೆ, ಚೇತರಿಕೆ ಪ್ರಮಾಣ ಗಮನಾರ್ಹವಾಗಿ ತಗ್ಗಿದರೂ, ನಿತ್ಯ ಸೋಂಕಿತರು ಪತ್ತೆಯಾಗುತ್ತಲೇ ಇರುವುದು ಕೊರೊನಾ ಹಾವಳಿ ಮುಗಿಯುವ ಲಕ್ಷಣವಿಲ್ಲ ಎನ್ನುವುದನ್ನು ಸೂಚಿಸುತ್ತಿದೆ.

ರಾಜ್ಯದ ಆರೋಗ್ಯ ಇಲಾಖೆಯು ಪ್ರತಿ ದಿನ ಏನಿಲ್ಲವೆಂದರೂ ಸರಾಸರಿ ಹದಿನೈದು ಸಾವಿರದಷ್ಟು ಪರೀಕ್ಷೆಗಳನ್ನು ನಡೆಸುತ್ತಿದ್ದು, ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ 8 ಸಾವಿರಕ್ಕೂ ಅಧಿಕ ಜನರ ಪರೀಕ್ಷಿಸುತ್ತಿದೆ.

ಆದರೂ, ನೆರೆಯ ಆಂಧ್ರಪ್ರದೇಶ, ತಮಿ­ಳು­ನಾಡಿಗೆ ಹೋಲಿಸಿದರೆ, ರಾಜ್ಯದಲ್ಲಿ ನಿತ್ಯ ಪರೀಕ್ಷೆಗಳ ಸಂಖ್ಯೆ ಕಡಿಮೆಯೇ ಇದೆ. ಹೆಚ್ಚು ಟೆಸ್ಟ್‌ಗಳನ್ನು ನಡೆಸುವುದು ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಪ್ರಮುಖ ಅಸ್ತ್ರವೆನ್ನುವುದು ಸಾಬೀತಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಟೆಸ್ಟ್‌ಗಳ ಸಂಖ್ಯೆ ವೃದ್ಧಿಸಬೇಕಾಗಿದೆ.

ಇದೇನೇ ಇದ್ದರೂ, ಈಗಲೂ ರಾಜ್ಯದಲ್ಲಿ ಕೋವಿಡ್‌-19 ಮರಣ ಪ್ರಮಾಣ 1.6 ಪ್ರತಿಶತದಷ್ಟಿದೆ. ಹಾಗೆಂದು, ಇದೇನೂ ಸಮಾಧಾನಪಡಬೇಕಾದ ವಿಚಾರವೇನೂ ಅಲ್ಲ. ಏಕೆಂದರೆ ಪ್ರತಿ ಜೀವವೂ ಅಮೂಲ್ಯವಾದದ್ದು.

ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವಲ್ಲಿ, ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯದ ಪರಿಶ್ರಮವನ್ನು ಐಸಿಎಂಆರ್‌ ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ಕೇಂದ್ರ ಸರ್ಕಾರವೂ ಶ್ಲಾಘಿಸಿದೆ. ಇದರ ನಡುವೆಯೇ ನೆನಪಿಡಬೇಕಾದ ಅಂಶವೆಂದರೆ, ಸರ್ಕಾರ-ಆರೋಗ್ಯ ಇಲಾಖೆಗಳ ಪರಿಶ್ರಮವಿದ್ದರೆ ಏನೂ ಸಾಲದು.

ಮುಖ್ಯವಾಗಿ, ಜನರ ಪೂರ್ಣ ಸಹಭಾಗಿತ್ವ ಈ ಹೋರಾಟಕ್ಕೆ ಅತ್ಯಗತ್ಯ. ಸರಕಾರ ಹೆಚ್ಚು ಟೆಸ್ಟಿಂಗ್‌ಗಳನ್ನೇನೋ ಮಾಡಬಹುದು, ಆದರೆ ಸಾಮಾಜಿಕ ಅಂತರದ ಪಾಲನೆ, ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ಅನಗತ್ಯವಾಗಿ ಹೊರಗೆ ಅಡ್ಡಾಡದಿರುವುದು.. ಇವೆಲ್ಲ ಜನರು ಪಾಲಿಸಬೇಕಾದ ಕ್ರಮಗಳು.

ಈ ಕಾರಣಕ್ಕಾಗಿಯೇ, ಮುಂಜಾಗ್ರತಾ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸುವುದರಲ್ಲೇ ಜಾಣತನವಿದೆ. ರಾಜ್ಯದ ಜನರ, ಆರೋಗ್ಯ ಇಲಾಖೆಯ ಹಾಗೂಆಡಳಿತದ ಸಂಘಟಿತ ಪ್ರಯತ್ನದಿಂದ ಮಾತ್ರವೇ ಗೆಲುವು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next