ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 46,148 ಹೊಸ ಕೋವಿಡ್ 19 ಪ್ರಕರಣ ವರದಿಯಾಗಿದ್ದು, 979 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಸೋಮವಾರ(ಜೂನ್ 28) ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ
ತಿಳಿಸಿದೆ.
ಇದನ್ನೂ ಓದಿ:ಸಿರಿಯಾ- ಇರಾಕ್ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿದ ಅಮೆರಿಕ: ಐವರು ಸಾವು
ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಒಟ್ಟು ಸಂಖ್ಯೆ 3,02,79,331ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 3,96,730ಕ್ಕೆ ಹೆಚ್ಚಳವಾಗಿದೆ. ಭಾರತದ ವಾರದ ಪಾಸಿಟಿವಿಟಿ ದರ ಶೇ.2.81ರಷ್ಟಿದೆ, ಅಲ್ಲದೇ ಪ್ರತಿದಿನದ ಪಾಸಿಟಿವಿಟಿ ದರ ಶೇ.2.94ರಷ್ಟಿದೆ ಎಂದು ವಿವರಿಸಿದೆ.
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 58,578 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಈವರೆಗೆ 2.93
ಕೋಟಿ ಜನರು ಗುಣಮುಖರಾಗಿದ್ದಾರೆ. ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಭಾನುವಾರ ದಾಖಲೆಯನ್ನು ಬರೆದಿದ್ದು, ಅಮೆರಿಕಕ್ಕಿಂತ ಅತೀ ಹೆಚ್ಚು ಕೋವಿಡ್ ಲಸಿಕೆ ನೀಡಿರುವುದಾಗಿ ವರದಿ ತಿಳಿಸಿದೆ. ದೇಶದಲ್ಲಿ ಈವರೆಗೆ 32,36 ಕೋಟಿ ಡೋಸ್ ಗಳಷ್ಟು
ಲಸಿಕೆ ನೀಡಿರುವುದಾಗಿ ತಿಳಿಸಿದೆ.
ಭಾನುವಾರ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಾನು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದೇನೆ. ಅಲ್ಲದೇ ನೂರು ವರ್ಷದ ಸಮೀಪದಲ್ಲಿರುವ ನನ್ನ ತಾಯಿ ಕೂಡಾ ಲಸಿಕೆ ಪಡೆದಿದ್ದಾರೆ. ಹೀಗಾಗಿ ಯಾರೂ ಕೂಡಾ ಲಸಿಕೆ ಕುರಿತ ವದಂತಿಯನ್ನು ನಂಬಬೇಡಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದರು.