ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 19,148 ಜನರಿಗೆ ಹೊಸದಾಗಿ ಸೊಂಕು ತಗುಲಿದ್ದು, ಒಟ್ಟಾರೆ ವೈರಾಣು ಪೀಡಿತರ ಪ್ರಮಾಣ 6,04,641ಕ್ಕೆ ಏರಿಕೆಯಾಗಿದೆ. ಅದರ ಜೊತೆಗೆ 434 ಜನರು ಒಂದೇ ದಿನದಲ್ಲಿ ಮೃತಪಟ್ಟಿದ್ದು, ಕೋವಿಡ್ ಮಹಾಮಾರಿಗೆ ಭಾರತದಲ್ಲಿ ಬಲಿಯಾದವರ ಸಂಕ್ಯೆ 17,834ಕ್ಕೆ ತಲುಪಿದೆ ಎಮದು ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಸುಮಾರು 2,26,947 ಸಕ್ರೀಯ ಪ್ರಕರಣಗಳಿದ್ದು, 3,59,859 ಜನರು ಸೊಂಕಿನಿಂದ ಗುಣಮುಖರಾಗಿದ್ದಾರೆ. ಬುಧವಾರ(1-07-2020) ದೇಶದಲ್ಲಿ ದಾಖಲೆಯ 507 ಜನರು ಮೃತಪಟ್ಟಿದ್ದರು.
ಭಾರತದಲ್ಲಿ ಜೂನ್ 26ರಿಂದ 18 ಸಾವಿರಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗತೊಡಗಿವೆ. ಇದೀಗ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ ವ್ಯಾಪಿಸುವಿಕೆಯಲ್ಲಿ ಭಾರತ ಜಗತ್ತಿನ 4ನೇ ಹಾಟ್ ಸ್ಪಾಟ್ ರಾಷ್ಟ್ರ ವೆನಿಸಿಕೊಂಡಿದ್ದು, ಇದೇ ರೀತಿ ವೈರಾಣು ಹರಡಿದರೇ 3ನೇ ಸ್ಥಾನಕ್ಕೆ ತಲುಪುವ ಸಾಧ್ಯತೆ ದಟ್ಟವಾಗಿದೆ. ದೇಶದಲ್ಲಿ ಗುಣಮುಖರಾಗುವವರ ಸಂಖ್ಯೆ 59.43% ಗೆ ಏರಿಕೆಯಾಗಿದೆ.
ಭಾರತದಲ್ಲಿ ಕಳೆದ 12 ದಿನದಲ್ಲಿ 2 ಲಕ್ಷ ಜನರಿಗೆ ಸೊಂಕು ತಗುಲಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತೀ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದು, ಇನ್ನೂ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆಯ 5,537 ಹೊಸ ಕೋವಿಡ್ ಪ್ರಕರಣಗಳು ದೃಢವಾಗಿದ್ದು, ಇದರೊಂದಿಗೆ ಇಲ್ಲಿ ಸೋಂಕಿತರ ಸಂಖ್ಯೆ 1,80,298ಕ್ಕೆ ಏರಿಕೆಯಾಗಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94,049, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 89,802ಕ್ಕೆ ಏರಿಕೆಯಾಗಿದೆ.