ಹೊಸಪೇಟೆ: ನಗರದ ರೈಲ್ವೆ ಇಲಾಖೆಯ 18 ಜನ ನೌಕರರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಮತ್ತೆ ಜನರಲ್ಲಿ ಕೋವಿಡ್ ಭಯ ಹುಟ್ಟಿಸಿದೆ.
ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಹೊಸಪೇಟೆಗೆ ಡೆಪ್ಯೂಟ್ ಆಗಿ ಆಗಮಿಸಿದ್ದ ರೈಲ್ವೆ ಇಲಾಖೆಯ ಲೋಕೋ ಪೈಲಟ್‌ಗಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲರೂ ಕೂಡ 30 ವರ್ಷದೊಳಗಿನ ನೌಕರರಾಗಿದ್ದಾರೆ. 18 ಜನರಲ್ಲಿ 11 ಜನ ನಗರದಲ್ಲಿ ಹೋಮ್ ಐಸೋಲೇಷನ್‌ನಲ್ಲಿದ್ದು, ನಾಲ್ವರು ಬಳ್ಳಾರಿ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ 3 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸಪೇಟೆಯಲ್ಲಿ ಒಟ್ಟು 22 ಜನರಿಗೆ ಕೊರೊನಾ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಇದೀಗ 18 ಜನ ರೈಲು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ರೈಲ್ವೆ ಇಲಾಖೆಗೆ ತಲೆನೋವಾಗಿದೆ. ಹೊಸಪೇಟೆ ಜಂಕ್ಷನ್ ಗೆ ವರ್ಗಾವಣೆಯಾಗಿ ಬಂದಿರುವ ನಗರದ ಚಾಪಲಗಡ್ಡೆಯ ಕಟ್ಟಡದಲ್ಲಿ(ಪಿಜಿ) ವಾಸವಾಗಿರುವ 18 ಜನ ನೌಕರರಿಗೆ ಕೋವಿಡ್ ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು 14 ದಿನಗಳ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ರೈಲು ನಿಲ್ದಾಣಕ್ಕೆ ಭೇಟಿ: ರೈಲ್ವೆ ಇಲಾಖೆ ಸಿಬ್ಬಂದಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣಕ್ಕೆ ಉಪವಿಭಾಗಾಧಿ ಕಾರಿ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಧಿ ಕಾರಿಗಳೊಂದಿಗೆ ಚರ್ಚಿಸಿ, ರೈಲ್ವೆ ಮುಖಾಂತರ ಬರುವ ಪ್ರಯಾಣಿಕರ ಸುರಕ್ಷತೆಗೂ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ, ತಾಲೂಕು ಆರೋಗ್ಯಾಧಿಕಾರಿ ಭಾಸ್ಕರ್, ಡಾ| ನಾಗೇಂದ್ರ ಇನ್ನಿತರರಿದ್ದರು.