ಪಣಜಿ: ಪುಟ್ಟ ರಾಜ್ಯ ಗೋವಾದಲ್ಲಿ ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಉಲ್ಭಣಗೊಳ್ಳುತ್ತಿದ್ದು, ರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆಯಾಗಿದೆ.
16 ಲಕ್ಷ ಜನಸಂಖ್ಯೆ ಹೊಂದಿರುವ ಗೋವಾ ರಾಜ್ಯ ಕೋವಿಡ್ ಎರಡನೇ ಅಲೆಯಿಂದ ನರಳುತ್ತಿದೆ. ಗುರುವಾರ ಪರೀಕ್ಷೆ ಕಳುಹಿಸಲಾದ 5,910 ಜನರಲ್ಲಿ 3,019 ಪಾಸಿಟಿವ್ ವರದಿ ಬಂದಿದೆ. ಇದು ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಪ್ರಕಾಣ ಶೇಕಡಾ 50 ರಷ್ಟು ದಾಟಿದ್ದು, ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
ಕೋವಿಡ್ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಗುರಾವಾರ ( ಏ.29) ರಾತ್ರಿ 9 ಗಂಟೆಯಿಂದ ಮೇ 3ರ ವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವುದಾಗಿ ಅಲ್ಲಿಯ ಸರ್ಕಾರ ತಿಳಿಸಿದೆ. ಹಾಗೂ ಈ ಅವಧಿಯಲ್ಲಿ ಕೇವಲ ಮೂಲಭೂತ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಕರ್ಫ್ಯೂ ( ಲಾಕ್ ಡೌನ್ ) ಜಾರಿ ಮಾಡಲಾಗಿದೆ. ಜನರು ರಸ್ತೆಗಿಳಿಯದಂತೆ ಆದೇಶ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ಓಡಾಡಿದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಪ್ರವಾಸಿಗರ ಪಾಲಿನ ಸ್ವರ್ಗ ಗೋವಾ ರಾಜ್ಯಕ್ಕೆ ಹೊರ ದೇಶಗಳಿಂದ ಬರುವವರೇ ಹೆಚ್ಚು. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಇಲ್ಲಿಯ ಕೆಲವು ಬೀಚ್‍ಗಳನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ರಾಜ್ಯದ ಪ್ರಮುಖ ಬೀಚ್‍ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.