ಬೆಂಗಳೂರು: ಇತ್ತೀಚೆಗೆ ಕೋವಿಡ್ 19 ಸೋಂಕಿನಿಂದ ಹುತಾತ್ಮರಾದ ಐವರು ಅಧಿಕಾರಿ-ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿ ಹಿರಿಯ ಅಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಸೌಮೇಂದು ಮುಖರ್ಜಿ, ಎಸ್.ಮುರುಗನ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಇತರೆ ಅಧಿಕಾರಿ-ಸಿಬ್ಬಂದಿ ಐದು ನಿಮಿಷ ಮೌನಾಚರಣೆ ಮೂಲಕ ಅಗಲಿದವರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಏನೇಲ್ಲ ಕ್ರಮಗಳು ಜಾರಿಯಾಗಿದ್ದವು. ಅವುಗಳು ಯಥಾ ಪ್ರಕಾರ ಜಾರಿಯಾಗಲಿವೆ. ಅನಗತ್ಯವಾಗಿ ಯಾರು ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ನಗರದಲ್ಲಿ ಐವರು ಅಧಿಕಾರಿ-ಸಿಬ್ಬಂದಿ ಕಳೆದುಕೊಂಡಿರುವುದು ಬಹಳ ದುಃಖದ ವಿಚಾರ. ಇದು ಇಲಾಖೆಗೆ ತುಂಬಲಾರದ ನಷ್ಟ. ಸಂಕಷ್ಟದ ಪರಿಸ್ಥಿತಿಯಲ್ಲಿ ಹಗಲು- ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು.
ಮತ್ತೆ 4 ಪೊಲೀಸ್ ಠಾಣೆ ಸೀಲ್: ನಗರದಲ್ಲಿ ಶುಕ್ರವಾರ ನಾಲ್ವರು ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 4 ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಯಲಹಂಕ ನ್ಯೂಟೌನ್ ಠಾಣೆ ಹೆಡ್ ಕಾನ್‌ಸ್ಟೆàಬಲ್‌ಗೆ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಬಾಗಲೂರು ಠಾಣೆ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಜೆ.ಸಿ. ನಗರ ಠಾಣೆ ಎಎಸ್‌ಐಗೆ ಸೋಂಕು ಕಂಡು ಬಂದ ಹಿನ್ನೆಲೆ, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಂಕಿತ ಎಎಸ್‌ಐ ರಜೆ ಮೇಲೆ ತೆರಳಿ ಮತ್ತೆ ಕರ್ತವ್ಯಕ್ಕೆ ಮರಳಿದಾಗ, ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಗೆ ಒಳಪಡಿಸಿದಾಗ ಕೋವಿಡ್ 19 ಪತ್ತೆಯಾಗಿತ್ತು. ಇನ್ನು ಸಂಜಯನಗರ ಠಾಣೆಯ ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ನಗರದಲ್ಲಿ ಇದುವರೆಗೂ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕೋವಿಡ್ 19 ಸೋಂಕಿಗೊಳಗಾಗಿದ್ದಾರೆ.