ಬೆಂಗಳೂರು: ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವ ಉಳಿದ ಐವರು ಹಾಕಿ ಆಟಗಾರರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದುದರಿಂದ ಮಂಗಳವಾರ ಸ್ಟ್ರೈಕರ್ ಮನ್‌ದೀಪ್ ಸಿಂಗ್ ಅವರನ್ನು “ಎಸ್‌ಎಸ್ ಸ್ಪರ್ಶ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್’ಗೆ ಸೇರಿಸಲಾಗಿತ್ತು. ಬುಧವಾರ ಉಳಿದ ಐವರು ಸೋಂಕಿತ ಆಟಗಾರರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸಾಯ್ ತಿಳಿಸಿದೆ.
ನಾಯಕ ಮನ್‌ಪ್ರೀತ್ ಸಿಂಗ್, ಡಿಫೆಂಡರ್‌ಗಳಾದ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್ ಮತ್ತು ಗೋಲ್‌ಕೀಪರ್ ಕೃಷ್ಣ ಬಹಾದೂರ್ ಪಾಠಕ್ ಆಸ್ಪತ್ರೆಗೆ ದಾಖಲಾದ ಇತರ ಹಾಕಿಪಟುಗಳು.
“ಆ. 20ರಿಂದ ತರಬೇತಿ ಪುನರಾರಂಭಗೊಳ್ಳಲಿದೆ. ಎಲ್ಲ ಆಟಗಾರರು ಎಲ್ಲ ಅವಧಿಗಳಲ್ಲೂ ಅಭ್ಯಾಸಕ್ಕೆ ಲಭಿಸಬೇಕೆಂಬುದು ನಮ್ಮ ಗುರಿ. ಹೀಗಾಗಿ ಉತ್ತಮ ಚಿಕಿತ್ಸೆ ಪಡೆಯುವ ಸಲುವಾಗಿ ಇವರನ್ನು ಆಸ್ಪತ್ರೆಗೆ ದಾಖಲಿಸಿಸಲು ನಿರ್ಧರಿಸಲಾಯಿತು. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಸಾಯ್ ತಿಳಿಸಿದೆ.
ಇದೇ ವೇಳೆ ವನಿತಾ ಹಾಕಿಪಟುಗಳ ಕೋವಿಡ್-19 ಟೆಸ್ಟ್ ಫಲಿತಾಂಶವೆಲ್ಲವೂ ನೆಗೆಟಿವ್ ಬಂದಿದೆ. ಎರಡೂ ತಂಡಗಳ ಆಟಗಾರರು 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿ ಮುಂದಿನ ಬುಧವಾರದಿಂದ (ಆ. 19) ಅಭ್ಯಾಸ ಮುಂದುವರಿಸಲಿದ್ದಾರೆ.