ಹುಬ್ಬಳ್ಳಿ: ಕೋವಿಡ್ 19 ಸೋಂಕಿನ ಆತಂಕ ಹಾಗೂ ಲಾಕ್‌ಡೌನ್ ನಡುವೆಯೂ ಕಂಟೈನ್ಮೆಂಟ್ ಪ್ರದೇಶದಲ್ಲಿ ಜನರ ಅಲೆದಾಟ ಕಡಿಮೆಯಾಗಿಲ್ಲ. ನಗರದ ಮುಲ್ಲಾ ಓಣಿ ಹಾಗೂ ಕೇಶ್ವಾಪುರ ಭಾಗದಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಇಡೀ ಹುಬ್ಬಳ್ಳಿ ಅಕ್ಷರಶಃ ಲಾಕ್‌ಡೌನ್ ಆಗಿದೆ. ಎಲ್ಲೆಡೆ ಬ್ಯಾರಿಕೇಡ್, ದೊಡ್ಡ ದೊಡ್ಡ ಕಟ್ಟಿಗೆಗಳಿಂದ ಕಟ್ಟಿ ಬಂದ್ ಮಾಡಲಾಗಿದೆ. ಆದರೆ ಜನರು ಅಲೆದಾಡುವುದು ಮಾತ್ರ ತಪ್ಪಿಲ್ಲ.
ಕಳೆದ ಒಂದು ವಾರದಿಂದ ಸರಕಾರದ ದ್ವಂದ್ವ ನೀತಿಗಳಿಂದ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದಾರೆ. ಕೆಲವೊಂದು ಕಡೆ ಮಾಡಿದ್ದಾರೆ ಎನ್ನುವ ಮಾತು ಗಳಿಂದ ಜನರು ಮಾತ್ರ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಿಲ್ಲ. ಮುಲ್ಲಾ ಓಣಿ, ಕರಾಡಿ ಓಣಿ, ಆಜಾದ್ ಕಾಲೋನಿ ಸೀಲ್‌ಡೌನ್ ಮಾಡಲಾಗಿದ್ದು, ಇದೀಗ ಹೊಸದಾಗಿ ಶಾಂತಿನಗರ ಸುತ್ತಮುತ್ತಲಿನ ಪ್ರದೇಶ ಕಂಟೈನ್‌ಮೆಂಟ್ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಕೇಶ್ವಾಪುರ ಸರ್ವೋದಯ ವೃತ್ತದಿಂದ ಹೋಗುವ ಎಲ್ಲ ಒಳರಸ್ತೆಗಳು ಬಂದ್ ಮಾಡಲಾಗಿದೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ತಿಂಗಳ ಆರಂಭ: ಮೊದಲ ವಾರದಲ್ಲಿ ಬ್ಯಾಂಕ್‌ಗೆ ತೆರಳಿ ಪ್ರತಿ ತಿಂಗಳ ವಹಿವಾಟು ನಡೆಸುವವರು ಬ್ಯಾಂಕ್ ಗಳ ಮುಂದೆ ಜಮಾಯಿಸಿರುವುದು ಕಂಡು ಬಂದಿತು. ನಗರದ ಕೇಶ್ವಾಪುರ, ಕಾರವಾರ ರಸ್ತೆ, ದಾಜೀಬಾನ ಪೇಟೆ, ಕೊಪ್ಪಿಕರ ರಸ್ತೆ, ವಿದ್ಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಬ್ಯಾಂಕ್‌ಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡು ಬಂದಿತು. ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ಗ್ರಾಹಕರನ್ನು ಒಳಬಿಡಲಾಗುತ್ತಿತ್ತು. ಇದಕ್ಕೂ ಮೊದಲು ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆಸ್ಯಾನಿಟೈಸರ್ ಹಚ್ಚುವ ಮೂಲಕ ಒಬ್ಬೊಬ್ಬರನ್ನಾಗಿ ಒಳಗೆ ಬಿಡಲಾಗುತ್ತಿದ್ದು, ಅಲ್ಲಿಯವರೆಗೆ ಗ್ರಾಹಕರಿಗೆ ಬ್ಯಾಂಕ್‌ಗಳ ಹೊರಗಡೆ ಕಾಯಬೇಕಾಗಿದೆ.
ಗ್ರಾಹಕರ ಸರದಿ: ನಗರದಲ್ಲಿರುವ ಸೂಪರ್ ಬಜಾರ್‌ಗಳ ಮುಂದೆ ಬೆಳಗ್ಗೆಯಿಂದ ಗ್ರಾಹಕರು ಸರದಿಯಲ್ಲಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ ಎನ್ನುವ ಮಾಹಿತಿ ತಿಳಿದ ಸಾರ್ವಜನಿಕರು ಹಾಗೂ ತಿಂಗಳ ಮೊದಲ ವಾರವಾಗಿರುವುದರಿಂದ ಹೆಚ್ಚಿನ ಜನರು ಸೂಪರ್ ಬಜಾರ್‌ಗಳಿಗೆ ಮುಗಿಬಿದ್ದಿರುವುದು ಕಂಡು ಬಂದಿತು.
ಕೇಶ್ವಾಪುರ, ದೇಶಪಾಂಡೆ ನಗರ, ವಿಶ್ವೇಶ್ವರ ನಗರ, ಗೋಕುಲ ರಸ್ತೆ, ಗಬ್ಬೂರ ಬೈಪಾಸ್, ವಿದ್ಯಾನಗರ ಸೂಪರ್ ಬಜಾರ್‌ಗಳಲ್ಲಿ ಹೆಚ್ಚಿನ ಜನಸಂದಣೆಯಾಗದಂತೆ ಗ್ರಾಹಕರನ್ನು ಹೊರಗಡೆ ಸರದಿಯಲ್ಲಿ ನಿಲ್ಲಿಸಿ ಒಬ್ಬೊಬ್ಬರನ್ನಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತಿದೆ. ಇದಲ್ಲದೆ ಒಳಗಿರುವ ಗ್ರಾಹಕರಿಗೆ ಬೇಗನೆ ಖರೀದಿ ಮುಗಿಸಿ ಹೊರಗಿನ ಗ್ರಾಹಕರು ಕಾಯುತ್ತಿದ್ದಾರೆಂದು ಸಿಬ್ಬಂದಿ ಹೇಳುತ್ತಿದ್ದದ್ದು ಕಂಡುಬಂದಿತು.
ಹೆಚ್ಚಿದ ವಾಹನ ಸಂಚಾರ: ನಗರದಲ್ಲಿ ಶನಿವಾರ ಹೆಚ್ಚಿನ ವಾಹನ ಸಂಚಾರ ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿದ್ದ ಪೊಲೀಸರು ಶನಿವಾರ ಬೆಳಗ್ಗೆ ಕಂಡು ಬರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಎನ್ನುವಂತೆ ಇದ್ದ ಪೊಲೀಸರು ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಮಾಡಲಿಲ್ಲ.
-ಬಸವರಾಜ ಹೂಗಾರ