Advertisement

ಮನೇಲಿ ಕೂರುತ್ತಿಲ್ಲ; ಅಪಾಯ ತಪ್ಪಿದ್ದಲ್ಲ!

02:39 PM Mar 28, 2020 | Suhan S |

ಶಿವಮೊಗ್ಗ: ಎಲ್ಲೆಡೆ ಕೋವಿಡ್ 19 ವೈರಸ್‌ ಸಾಕಷ್ಟು ಭೀತಿ ಹುಟ್ಟಿಸಿದ್ದು, ವೈರಸ್‌ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದ್ದರೂ ನಗರದ ಜನತೆ ಈ ಆದೇಶವನ್ನು ಸರಿಯಾಗಿ ಪಾಲನೆ ಮಾಡದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

Advertisement

ಮುಂದಿನ 21 ದಿನ ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದರೂ, ಸೂಚನೆ ಧಿಕ್ಕರಿಸಿ ಕೆಲವರು ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವುದು ಮಾಮೂಲಿಯಾಗಿದೆ. ಯಾವುದೇ ಕೆಲಸ ಇಲ್ಲದಿದ್ದರೂ ಅನಗತ್ಯವಾಗಿ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ನಗರ ಸಂಚಾರ ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ಲಾಠಿ ಬೀಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಕೋವಿಡ್ 19 ವೈರಸ್‌ ಮುಂದೆ ಎಂತಹ ದೊಡ್ಡ ಅನಾಹುತ ಮಾಡುತ್ತದೆ ಎಂದು ಕಿಂಚಿತ್ತೂ ಯೋಚಿಸದೆ ಕೆಲವರು ಸೂಚನೆಯನ್ನೇ ಧಿಕ್ಕರಿಸಿ ಅಡ್ಡಾಡುತ್ತಿದ್ದಾರೆ. ಪೊಲೀಸರೇ ಕೈಚೆಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. ದಿನಸಿ, ಹಾಲು, ಔಷಧ, ತರಕಾರಿ ಮತ್ತಿತರ ಅವಶ್ಯಕ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲವರು ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತರಕಾರಿ, ದಿನಸಿ, ಹಾಲು ಖರೀದಿ ನೆಪದಲ್ಲಿ ಮನೆಯಿಂದ ಹೊರಗೆ ಬಂದು ಸ್ವತ್ಛಂದವಾಗಿ ಸಂಚರಿಸುತ್ತಿರುವುದು ಕಂಡು ಬಂದಿದೆ.

ಭಾರೀ ಅನಾಹುತ ಆಗುವುದಕ್ಕೂ ಮೊದಲು ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಬೇಕು. ಅನಗತ್ಯವಾಗಿ ಹೊರಗೆ ಬರುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ. ಹಾಲು, ತರಕಾರಿ, ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಪ್ರತಿ ಬಡಾವಣೆಯಲ್ಲಿನ ಕೇರಿಗಳಿಗೆ ತಲುಪಿಸುವ ವ್ಯವಸ್ಥೆ ಜಿಲ್ಲಾಡಳಿತದಿಂದ ತಕ್ಷಣವೇ ಆಗಬೇಕಿದೆ.

ಮನೆಯಿಂದ ಅನಗತ್ಯವಾಗಿ ಹೊರಗೆ ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ನಿಯಂತ್ರಣ ಸಾಧ್ಯವಾಗಲಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಕೆಲವೆಡೆ ನಿಜಕ್ಕೂ ಜನತೆ ಶಿಸ್ತನ್ನು ಪಾಲಿಸುತ್ತಿದ್ದಾರೆ. ಇನ್ನು ಕೆಲವೆಡೆ ಶಿಸ್ತನ್ನು ಸಂಪೂರ್ಣ ಉಲ್ಲಂಘಿಸಲಾಗುತ್ತಿದೆ. ತರಕಾರಿ, ಹಾಲು ಕೊಳ್ಳುವುದಕ್ಕೆ ಮುಗಿಬಿದ್ದ ಜನರನ್ನ ಪೊಲೀಸರು ಚದುರಿಸಿದ ಘಟನೆಯೂ ನಡೆದಿದೆ.

Advertisement

ಅನಗತ್ಯವಾಗಿ ಮನೆಯಿಂದ ಹೊರಬಂದವರ ವಾಹನಗಳ ಚಕ್ರದ ಗಾಳಿ ತೆಗೆಯುವ ಪ್ರಯತ್ನವನ್ನು ಪೊಲೀಸರು ನಡೆಸಿದ್ದಾರೆ. ಗಾಂಧಿ  ಬಜಾರ್‌, ಬಿ.ಎಚ್‌. ರಸ್ತೆ, ನೆಹರು ರಸ್ತೆ, ವಿನೋಬನಗರದ ಕೆಲವೆಡೆ ಜನರು ಯಾವುದೇ ಆತಂಕವಿಲ್ಲದೆ ತಿರುಗಾಡುತ್ತಿದ್ದ ದೃಶ್ಯವೂ ಕಂಡುಬಂತು. ಲಾಕ್‌ ಡೌನ್‌ನ ಎರಡನೇ ದಿನವೂ ತರಕಾರಿಗಳಿಗೆ ಜನ ಮುಗಿಬಿದ್ದರೆ, ಕೆಲ ದಿನಸಿ ಮತ್ತು ಹಾಲಿನ ಅಂಗಡಿಗಳಲ್ಲಿ ಶಿಸ್ತನ್ನು ಪಾಲಿಸಿದರು. ವಿನೋಬ ನಗರದ ಎಪಿಎಂಸಿ ಮಾರುಕಟ್ಟೆ ಬಂದ್‌ ಮಾಡಲಾಗಿದ್ದರೂ ಕರಿಯಣ್ಣನ ಬಿಲ್ಡಿಂಗ್‌ ಜನ ತರಕಾರಿಗಾಗಿ ಮುಗಿಬಿದ್ದಿದ್ದರು. ಇದಕ್ಕೆ ನಿಯಂತ್ರಣ ಹೇರಬೇಕಿದೆ.

ಕ್ರಮಕ್ಕೆ ಒತ್ತಾಯ: ಲಾಕ್‌ ಡೌನ್‌ ಇದ್ದರೂ ಕೆಲವರು ನಗರದಲ್ಲಿ ಸ್ವತ್ಛಂದವಾಗಿ ತಿರುಗುತ್ತಿರುವುದು ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ತಕ್ಷಣವೇ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾದರೂ

ಆಶ್ಚರ್ಯ ಇಲ್ಲ ಹಾಲು, ತರಕಾರಿ ಕೊಳ್ಳುವ ನೆಪದಲ್ಲಿ ಮನೆಯಿಂದ ಹೊರಬಂದು ಸಮಾಜದ ನೆಮ್ಮದಿ ಕೆಡಿಸುತ್ತಿರುವ ಅವರ ವಿರುದ್ಧ ಬಿಗಿ ಯಾದ ಕ್ರಮ ಜರುಗಿಸಬೇಕು. ಇಲ್ಲ ವಾದಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾದೀತು.

Advertisement

Udayavani is now on Telegram. Click here to join our channel and stay updated with the latest news.

Next