ಧಾರವಾಡ: ಇಷ್ಟೊತ್ತಿಗಾಗಲೇ ಮುತ್ತುಗದ ಎಲೆಯ ಸಾವಿರ ಸಾವಿರ ಸರಗಳು ಈ ಕೂಲಿ ಕಾರ್ಮಿಕರ ಮನೆಯ ಹಟ್ಟಿಯಲ್ಲಿ ಚಿಕ್ಕ ಬಣವೆಯಾಗಿರುತ್ತಿದ್ದವು. ಏಪ್ರಿಲ್-ಮೇ ಎರಡು ತಿಂಗಳು ಮುತ್ತುಗದ ಎಲೆಗಳು ದಾಸ್ತಾನಾದರೆ ಸಾಕು. ಮಳೆಗಾಲದಲ್ಲಿ ಬಡ್ಡಿ ಹಣಕ್ಕಾಗಿ ಲೇವಾದೇವಿ ವ್ಯವಹಾರಸ್ಥರ ಮನೆಗೆ ಹೋಗುವುದು ತಪ್ಪುತ್ತದೆ. ಆದರೆ ಕೋವಿಡ್ 19 ಲಾಕ್ ಡೌನ್‌ನಿಂದ ಮುತ್ತುಗದ ಎಲೆಯನ್ನು ಮೋಟಾರುಗಳ ಮೂಲಕ ತಂದು ದಾಸ್ತಾನು ಮಾಡಿಕೊಳ್ಳುವವರಿಗೂ ತೊಂದರೆಯಾಗುತ್ತಿದೆ.
ಹೌದು. ಧಾರವಾಡ ಜಿಲ್ಲೆಯ ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕು; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು; ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದಿರುವ ಮುತ್ತುಗದ ಎಲೆ ಕಟ್ಟುವ ಗೃಹೋದ್ಯಮ ತೆರೆಮರೆಯಲ್ಲಿಯೇ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಪ್ರತಿವರ್ಷ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಭರಪೂರ ಚಿಗುರಿನೊಂದಿಗೆ ಬೆಳೆದು ನಿಲ್ಲುವ ಮುತ್ತುಗದ ಎಲೆಯನ್ನು ಬಡ ಕೂಲಿ ಕಾರ್ಮಿಕರು ಕಿತ್ತು ತಂದು ಸರಮಾಡಿ ಪೊಣಿಸಿ ಒಣಗಿಸಿಟ್ಟುಕೊಳ್ಳುತ್ತಾರೆ. ಮಳೆಗಾಲಕ್ಕೆ ಹಣದ ಅಗತ್ಯವಿದ್ದಾಗ ಅವುಗಳನ್ನು ಸುಂದರ ಊಟದ ಎಲೆಯಾಗಿ ಸಿದ್ದಗೊಳಿಸಿ ಮಾರಾಟ ಮಾಡುತ್ತಾರೆ. ಸದ್ಯಕ್ಕೆ 100 ಎಲೆಗಳ ಒಂದು ಕಟ್ ಗೆ (ಪೆಂಡಿಗೆ) 100-120 ರೂ.ಗಳವರೆಗೂ ಹಣ ಸಿಕ್ಕುತ್ತದೆ. ಸಾವಿರ ಕಟ್‌ಗಳಿಗೆ ಆಗುವಷ್ಟು ಅಂದರೆ ಕಡು ಬಡವರಿಗೆ ಹತ್ತು ಸಾವಿರ ರೂ.ಗಳ ಉತ್ಪನ್ನವನ್ನು ಈ ಮುತ್ತುಗದ ಎಲೆ ಪ್ರತಿವರ್ಷ ಒದಗಿಸುತ್ತದೆ. ಗಡಿ ಬಂದ್ ತಂದ ಕುತ್ತು: ಕೊರೊನಾ ಲಾಕ್‌ಡೌನ್ ನಿಂದಾಗಿ ಧಾರವಾಡದಿಂದ ಹಳಿಯಾಳ, ದಾಂಡೇಲಿ, ಬೀಡಿ, ಖಾನಾಪುರ, ಯಲ್ಲಾಪುರ, ಕಿರವತ್ತಿ, ಆಸಗಟ್ಟಿ, ಮುಕ್ಕಲ್ಲ, ಕೂಸನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಜಿಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದೆ.
ಹೀಗಾಗಿ ಎಲೆ ಮುರಿಯುವ ಬಡವರು ತಮ್ಮ ಊರಿನ ಅಕ್ಕಪಕ್ಕದ ಗುಡ್ಡದಲ್ಲಿ ಮತ್ತು ಪಾಳುಬಿದ್ದ ಜಮೀನುಗಳಲ್ಲಿ ಚಿಗುರಿದ ಸಣ್ಣ ಸಣ್ಣ ಎಲೆಗಳನ್ನು ಮಾತ್ರ ಇದೀಗ ತಂದು ಒಣಗಿಸುತ್ತಿದ್ದಾರೆ. ಏಪ್ರಿಲ್ ಇಡೀ ತಿಂಗಳು ಲಾಕ್‌ಡೌನ್ ಬಲಿ ಪಡೆದಿದ್ದರಿಂದ ಈ ವರ್ಷ ಶೇ.20ರಷ್ಟು ಮಾತ್ರ ಎಲೆ ಸಂಗ್ರಹ ಮಾಡಿಕೊಳ್ಳಲು ಸಾಧ್ಯವಾಗಿದೆ. ಅರಣ್ಯ ಮತ್ತು ಅದರ ಸುತ್ತಲಿನ ಪಾಳು ಭೂಮಿ, ಗಾವಾಠಾಣಾ, ಕುರಚಲು ಕಾಡುಗಳು ಮತ್ತು ಅರೆಮಲೆನಾಡು ಸೀಮೆಯಲ್ಲಿ ಅತ್ಯಂತ ಹುಲುಸಾಗಿ ಮುತ್ತುಗದ ಎಲೆ ಬೆಳೆಯುತ್ತದೆ. ಹೀಗಾಗಿ ಎಲೆ ಕಟ್ಟುವವರು ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶಗಳನ್ನು ಹೊಕ್ಕು ವಸತಿ ಉಳಿದು, ಟ್ರಾÂಕ್ಟರ್, ಚಕ್ಕಡಿ ಹೂಡಿಕೊಂಡು ಎಲೆ ಮುರಿದು ತಂದು ಅವುಗಳನ್ನು ಒಣಗಿಸಿಟ್ಟುಕೊಳ್ಳುತ್ತಾರೆ. ಇದೀಗ ಜಿಲ್ಲಾಗಡಿಗಳು ಬಂದ್ ಆಗಿದ್ದರಿಂದ ವಾಹನಗಳಿಗೆ ಪರವಾನಗಿ ಇಲ್ಲ. ಇನ್ನು ಎಲೆ ಮುರಿಯಲು ಬೇರೆ ಹಳ್ಳಿಗಳಿಗೆ ಹೋಗಲು ಕೂಡ ಕೊರೊನಾದಿಂದ ಹೆದರಿಕೆಯಾಗುತ್ತಿದ್ದು, ಎಲೆ ಮುರಿಯುವುದನ್ನೇ ಕೈಬಿಟ್ಟಿದ್ದಾರೆ.
ಊಟಕ್ಕೆ ಪವಿತ್ರ ತಟ್ಟೆ: ಮುತ್ತಗದ ಎಲೆ ಬಾಳೆಎಲೆಗಿಂತಲೂ ಶ್ರೇಷ್ಠ ಎನ್ನುವ ಪರಿಕಲ್ಪನೆ ಇದೆ. ಇದರಲ್ಲಿ ಪ್ರತಿದಿನ ಊಟ ಮಾಡುವುದರಿಂದ ಸಿದ್ದಿ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಉತ್ತರ ಕರ್ನಾಟಕದ ಪ್ರಸಿದ್ಧ ಬ್ರಾಹ್ಮಣ ಮಠಗಳು, ಬ್ರಾಹ್ಮಣ ವಟುಗಳು ಮತ್ತು ಸಿದ್ದಿ ಪುರುಷರು ಇವುಗಳನ್ನು ಹಳ್ಳಿಗಳಿಗೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಪ್ರತಿವರ್ಷ ಈ ಮೂರು ಜಿಲ್ಲೆಗಳಲ್ಲಿ ಸೇರಿ ಅಂದಾಜು ಕೋಟ್ಯಂತರ ರೂ. ಲೆಕ್ಕದಲ್ಲಿ ಈ ಮುತ್ತುಗದ ಎಲೆಯ ವಹಿವಾಟು ನಡೆಯುತ್ತದೆ. ಪ್ಲಾಸ್ಟಿಕ್ ತಟ್ಟೆಗಳಿಗೆ ಪರ್ಯಾಯವಾಗಿ ಬೆಳೆದು ನಿಂತಿರುವ ಮುತ್ತುಗದ ಎಲೆ ಅಡಿಕೆ ತಟ್ಟೆಗಿಂತಲೂ ಭಿನ್ನವಾಗಿದೆ. ನೆಲಕ್ಕೆ ಬಿದ್ದ ಮೂರು ತಿಂಗಳಲ್ಲಿ ಇದು ಕೊಳೆತು ಮಣ್ಣಿನಲ್ಲಿ ಲೀನವಾಗಿ ಬಿಡುತ್ತದೆ. ಬಾಳೆಎಲೆ ಒಣಗಿ ಹೋಗುತ್ತದೆ. ಆದರೆ ಮುತ್ತುಗದ ಎಲೆಯನ್ನು ವರ್ಷಪೂರ್ತಿಯಾಗಿ ಇಟ್ಟುಕೊಂಡು ಅದರಲ್ಲಿ ಊಟ ಮಾಡಬಹುದು. ಹೀಗಾಗಿ ಪರಿಸರ ಸ್ನೇಹಿ ಎಲೆಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ಪ್ರತಿ ವರ್ಷ ಸಾವಿರ ಕಟ್ಟುಗಳಿಗೆ ಆಗುವಷ್ಟು ಎಲೆ ಮುರಿಯುತ್ತಿದ್ದೇವು. ಈ ವರ್ಷ 200 ಕಟ್‌ಗಳಾದರೆ ಹೆಚ್ಚು. ಕೊರೊನಾದಿಂದ ಎಲ್ಲೆಡೆ ಭಯ ಆವರಿಸಿಕೊಂಡಿದ್ದು ಹೋಗಲು ಭಯವಾಗುತ್ತಿದೆ. ಹೀಗಾಗಿ ಎಲೆ ತರುವುದನ್ನೇ ಬಿಟ್ಟಿದ್ದೇವೆ. –
ಶಿವನವ್ವ ಕುಂಬಾರ, ಎಲೆ ಕಟ್ಟುವ ಮಹಿಳೆ
-ಬಸವರಾಜ ಹೊಂಗಲ್