ಬಾಗಲಕೋಟೆ: ಕೋವಿಡ್ 19 ಸಂಕಷ್ಟ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆ (ಇಎಸ್‌ಐ)ಗೂ ತಟ್ಟಿದ್ದು, ಕಳೆದ ಏ. 16ರಿಂದ ಆಸ್ಪತ್ರೆಗೆ ಬೀಗ ಹಾಕಲಾಗಿದೆ.
ಹೌದು, ಕೇಂದ್ರ ಮತ್ತು ರಾಜ್ಯ ಸರ್ಕಾರದಡಿ ಬರುವ ಕಾರ್ಮಿಕರು, ಖಾಸಗಿ ಉದ್ಯೋಗಿಗಳಿಗಾಗಿ ಇಎಸ್‌ಐ ಸೌಲಭ್ಯದಡಿ ನವನಗರದ ಸೆಕ್ಟರ್ ನಂ. 63ಎ (ಬೃಂದಾವನ ಸೆಕ್ಟರ್)ನಲ್ಲಿ ಆಸ್ಪತ್ರೆ ಇದೆ. ಈಆಸ್ಪತ್ರೆಗಾಗಿ ನಿತ್ಯವೂ ನೂರಾರು ಜನ ಕಾರ್ಮಿಕರು ಬರುತ್ತಾರೆ. ಆದರೆ, ಕಳೆದ ಏ. 16ರಿಂದ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಕಾರ್ಮಿಕರು, ಆಸ್ಪತ್ರೆ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಆಸ್ಪತ್ರೆಗೆ ಬಂದಿದ್ದ ಸೋಂಕಿತ: ಇಎಸ್‌ಐ ಆಸ್ಪತ್ರೆಗೆ ಬೀಗ ಹಾಕಲು ಪ್ರಮುಖ ಕಾರಣ ಕೋವಿಡ್ 19 ವೈರಸ್. ಈ ಆಸ್ಪತ್ರೆಗೆ ಹಳೆಯ ಬಾಗಲಕೋಟೆಯ ಕಾರ್ಖಾನೆಯೊಂದರ ಕಾರ್ಮಿಕ ಏ. 12ರಂದು ಚಿಕಿತ್ಸೆ ಪಡೆದು, ಔಷಧ ತೆಗೆದುಕೊಂಡು ಹೋಗಲು ಬಂದಿದ್ದ. ಇಎಸ್‌ಐ ಆಸ್ಪತ್ರೆಯ ವೈದ್ಯರು ಆ ಕಾರ್ಮಿಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಔಷಧ ಕೂಡ ನೀಡಿ ಕಳುಹಿಸಿದ್ದರು. ಆದರೆ, ಅದೇ ಕಾರ್ಮಿಕನಿಗೆ ಏ. 15ರಂದು ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ಆತನ ಟ್ರಾವೆಲ್ ಹಿಸ್ಟರಿ ತೆಗೆದಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಹಾಗೂ ಆತ ಎಲ್ಲೆಲ್ಲಿ ಪ್ರಯಾಣ ಮಾಡಿದ್ದನೋ ಅದಕ್ಕೆ ಸಂಬಂಧಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು.
ಹಳೆಯ ನಗರದ 52 ವರ್ಷದ ಪಿ-262 ವ್ಯಕ್ತಿ, ಇಎಸ್‌ಐ ಆಸ್ಪತ್ರೆಗೂ ಭೇಟಿ ನೀಡಿದ್ದರಿಂದ, ಈ ಆಸ್ಪತ್ರೆಯ ಓರ್ವ ವೈದ್ಯ, ಮೂವರು ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಇಡೀ ಆಸ್ಪತ್ರೆಗೆ 14 ದಿನಗಳ ಕಾಲ ಬೀಗ ಹಾಕಲಾಗಿದೆ. ಮಗುವಿನಿಂದ ಬಂದಿತ್ತು: ಹಳೆಯ ನಗರದ ಕಾರ್ಮಿಕ (ವಿಮಾ ಉದ್ಯೋಗಿ) ಪಿ-262ಗೆ ಅವರ ಪಕ್ಕದ ಮನೆಯ ನಾಲ್ಕು ವರ್ಷದ ಮಗುವಿನಿಂದ ಸೋಂಕು ತಗುಲಿತ್ತು.
ಈ ವಿಮಾ ಉದ್ಯೋಗಿಯ ಪತ್ನಿ ಟ್ಯೂಶನ್ ಹೇಳುತ್ತಿದ್ದು, ಟ್ಯೂಶನ್ಗೆ ಬರುತ್ತಿದ್ದ ಪಿ-186 ಸಂಖ್ಯೆಯ ರೋಗಿ ನಾಲ್ಕು ವರ್ಷದ ಮಗುವಿಗೆ ಆತನ ತಾಯಿ (ಮೃತ ವೃದ್ಧನ ಪಕ್ಕದ ಮನೆಯ ಮಹಿಳೆ ಪಿ-165)ಯಿಂದ ಸೋಂಕು ಬಂದಿತ್ತು. ಈಗ ತಾಯಿ-ಮಗು ಇಬ್ಬರೂ ಸೋಂಕಿನಿಂದ ಗುಣಮುಖರಾಗಿ, ಶನಿವಾರವಷ್ಟೇ ಮನೆಗೆ ಹೋಗಿದ್ದಾರೆ. ಕಾರ್ಮಿಕ ಪಿ-262 ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕಾರ್ಮಿಕ, ಇಎಸ್‌ಐ ಆಸ್ಪತ್ರೆಗೆ ಬಂದು ಹೋಗಿದ್ದರಿಂದ ಸಧ್ಯ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ವಿಮಾ ನೌಕರರು, ಸಹಕಾರ ನೀಡಬೇಕೆಂದು ಆಸ್ಪತ್ರೆಯ ವೈದ್ಯರು ಮನವಿ ಮಾಡಿದ್ದಾರೆ. ವೈದ್ಯರು, ಸಿಬ್ಬಂದಿ ಏ. 29ರವರೆಗೆ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ನಗರದ ಇಎಸ್‌ಐ ವಿಮಾ ಕಾರ್ಮಿಕನೊಬ್ಬ ಆಸ್ಪತ್ರೆಗೆ ಬಂದಿದ್ದ. ಆತನಿಗೆ ಏ.15ರಂದು ಕೋವಿಡ್ 19 ದೃಢಪಟ್ಟಿದ್ದು, ಆತ ಸೋಂಕು ಪತ್ತೆಯಾಗುವ ಎರಡು ದಿನದ ಹಿಂದೆ ಆಸ್ಪತ್ರೆಗೆ ಬಂದು ಹೋಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಇಎಸ್‌ಐ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಹೋಂ ಕ್ವಾರಂಟೈನ್‌ನಲ್ಲಿರಲುಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆ ಬಂದ್ ಆಗಿದೆ. –
ಡಾ|
ಅನಂತ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
-ಶ್ರೀಶೈಲ ಕೆ. ಬಿರಾದಾರ