ಬೆಳಗಾವಿ: ಅಕ್ಷಯ ತೃತೀಯ ಹಬ್ಬ ಎಂದರೆ ಬಂಗಾರ ಖರೀದಿಗೆ ಶುಭ ದಿನ. ಆದರೆ ಈ ಲಾಕ್‌ಡೌನ್ ಬಂಗಾರ ಖರೀದಿಗೆ ಕಡಿವಾಣ ಹಾಕಿದ್ದು, ಒಂದೇ ದಿನದಲ್ಲಿ ಜಿಲ್ಲೆಯಾದ್ಯಂತ ಸುಮಾರು 100 ಕೋಟಿ ರೂ.ಗೂ ಹೆಚ್ಚು ನಡೆಯಬೇಕಾಗಿದ್ದ ವ್ಯವಹಾರ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ಬಿಟ್ಟಿದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಮೀಸಲಿಟ್ಟ ದಿನವಾಗಿದೆ. ಈ ದಿನದಂದು ಬಂಗಾರ ಕೊಂಡರೆ ವರ್ಷವಿಡೀ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿಂದ ಬಹುತೇಕ ಜನ ತಮ್ಮ ಆರ್ಥಿಕ ಸ್ಥಿತಿಗೆ ಆನುಸಾರವಾಗಿ ಚಿನ್ನ ಖರೀದಿಯಲ್ಲಿ ತೊಡಗಿಕೊಳ್ಳುತ್ತಾರೆ. ಈ ವರ್ಷದ ಬಂಗಾರ ವ್ಯವಹಾರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಜಿಲ್ಲೆಯಲ್ಲಿ ಸುಮಾರ 100 ಕೋಟಿ ರೂ. ಚಿನ್ನದ ವ್ಯವಹಾರ ನೀರು ಪಾಲಾದಂತಾಗಿದೆ.
ಚಿನ್ನಾಭರಣ ಅಂಗಡಿಗಳು ತೆರೆದಿಲ್ಲವಾದರೂ ಅಕ್ಷಯ ತೃತೀಯದ ಲಾಭ ಪಡೆಯಲು ಕೆಲವು ಜ್ವೇಲರ್ ಅಂಗಡಿಕಾರರು ಆನ್ ಲೈನ್‌ನಲ್ಲಿ ಮುಂಗಡ ಖರಿದಿಗೆ ಅವಕಾಶ ಕಲ್ಪಿಸಿದ್ದರು. ಕೆಲವು ರಿಯಾಯ್ತಿಗಳನ್ನು ಘೋಷಿಸಿದ್ದರು. ಆದರೆ ಲಾಕ್‌ಡೌನ್ ಮುಗಿದ ಮೇಲೆಯೇ ಬುಕಿಂಗ್ ಮಾಡಿದ ಬಂಗಾರ ಕೈಗೆ ಸಿಗಲಿದೆ.
ಶಹಾಪುರ ಸೇರಿದಂತೆ ಬೆಳಗಾವಿ ನಗರದಲ್ಲಿ ಒಟ್ಟು 120 ಚಿನ್ನಾಭರಣದ ಅಂಗಡಿಗಳು ಹಾಗೂ ಜಿಲ್ಲೆಯಲ್ಲಿ ಸುಮಾರು 640 ಅಂಗಡಿಗಳು ಇವೆ. ಏನಿಲ್ಲವೆಂದರೂ ಅಕ್ಷಯ ತೃತೀಯದಂದು ಸುಮಾರು 100 ಕೋಟಿ ರೂ.ವರೆಗೆ ವ್ಯವಹಾರ ನಡೆಯುತ್ತದೆ. ಇದರಲ್ಲಿ 20ರಿಂದ 30 ಕೊಟಿ ರೂ.ವರೆಗೆ ಸಕಾರಕ್ಕೆ ತೆರಿಗೆ ಹೋಗುತ್ತದೆ. ಆದರೆ ಎಲ್ಲ ಅಂಗಡಿಗಳು ಬಂದ್ ಆಗಿದ್ದರಿಂದ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡು ಇಷ್ಟು ಪ್ರಮಾಣದ ತೆರಿಗೆ ಸರ್ಕಾರಕ್ಕೆ ಜಿಲ್ಲೆಯಿಂದ ಕಡಿಮೆ ಆಗಿದೆ. ಇದು ಸರ್ಕಾರಕ್ಕೂ ಹಾಗೂ ಸಾರ್ವಜನಿಕರಿಗೂ ಹಾನಿ ಎನ್ನುತ್ತಾರೆ ಜ್ವೆಲರ್ ಮಾಲೀಕರು.
ಏಪ್ರೀಲ್, ಮೇ ಹೆಚ್ಚಿನ ಮದುವೆ ಮುಹೂರ್ತಗಳಿರುವ ತಿಂಗಳುಗಳು. ಆದರೆ ಈ ತಿಂಗಳಲ್ಲೇ ಲಾಕ್‌ಡೌನ್ ಆಗಿದ್ದರಿಂದ ಬಂಗಾರ, ಬೆಳ್ಳಿ ವ್ಯವಹಾರಕ್ಕೆ ಭಾರೀ ಸಮಸ್ಯೆ ಆಗಿದೆ. ಮದುವೆಗಾಗಿ ಜನರು ಚಿನ್ನಾಭರಣ ಖರೀದಿಸಲು ತಿಂಗಳುಗಳ ಮೊದಲೇ ಅಂಗಡಿಗಳ ಮುಂದೆ ಬಂದು ನಿಲ್ಲುತ್ತಿದ್ದರು. ಆದರೆ ಈ ಲಾಕ್‌ಡೌನ್ ಬಂಗಾರದ ವ್ಯವಹಾರವನ್ನು ನುಚ್ಚುನೂರು ಮಾಡಿ ಬಿಟ್ಟಿದೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಬಂಗಾರ ಅಂಗಡಿಗಳಿಂದ ಹೋಗುತ್ತದೆ. ಈ ವ್ಯವಹಾರವನ್ನು ಸಂಪೂರ್ಣವಾಗಿ ತಡೆ ಹಿಡಿದಿದ್ದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಅಕ್ಷಯ ತೃತೀಯತೀಯ ದಿನವಾದರೂ ಒಂದು ದಿನ ಅವಕಾಶ ಮಾಡಿ ಕೊಟ್ಟಿದ್ದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ಮಾಡಬಹುದಾಗಿತ್ತು. ದಿನಸಿ ಅಂಗಡಿ, ಔಷಧ ಅಂಗಡಿಯವರಿಗಿಂತಲೂ ವ್ಯವಸ್ಥಿತವಾಗಿ ವ್ಯಾಪಾರ ಮಾಡುತ್ತಿದ್ದೇವು. ಆದರೆ ಸರ್ಕಾರ ನಿಯಮ ಸಡಿಲಿಕೆ ಮಾಡಲಿಲ್ಲ.
-ಅನಿಲ ಪೋತದಾರ, ರಾಜ್ಯ ಬಂಗಾರ ಫೇಡರೇಷನ್ ನಿರ್ದೇಶಕರು
-ಭೈರೋಬಾ ಕಾಂಬಳೆ