ಹುಬ್ಬಳ್ಳಿ: ಹೈನುಗಾರಿಕೆಯನ್ನೇ ನಂಬಿದ್ದ ರೈತರ ದುಡಿಮೆ ಮೇಲೂ ಕೋವಿಡ್ 19 ಪರಿಣಾಮ ಬೀರಿದೆ. ಈ ಮಹಾಮಾರಿ ತಮ್ಮ ಗ್ರಾಮಕ್ಕೂ ಕಾಲಿಡಬಾರದೆಂದು ಹಾಲು ಮಾರಲು ನಗರಕ್ಕೆ ಹೋಗುವುದನ್ನೆ ನಿಲ್ಲಿಸಿದ್ದಾರೆ.
ಹೈನುಗಾರಿಕೆ ಮಾಡುವ ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಕಲಘಟಗಿ ಸೇರಿದಂತೆ ಇನ್ನಿತರೆ ತಾಲೂಕುಗಳ ಅನೇಕ ಗ್ರಾಮಗಳು ಸ್ವಯಂ ದಿಗ್ಬಂಧನಕ್ಕೆ ಒಳಪಟ್ಟಿವೆ. ಕೆಲ ಗ್ರಾಮಗಳಲ್ಲಿ ಗ್ರಾಮದ ಹಿರಿಯರೆಲ್ಲ ಸೇರಿ ತಮ್ಮ ಗ್ರಾಮಕ್ಕೆ ಹೊರಗಿನವರು ಯಾರೂ ಬರಬಾರದು, ಗ್ರಾಮದಿಂದ ಯಾರೂ ನಗರಕ್ಕೆ ಹೋಗಬಾರದು. ಹಾಗೇನಾದರೂ ಮಾಡಿದರೆ ನಿಮ್ಮ ಕುಟುಂಬದವರ ಮೇಲೆಯೇ ದಿಗ್ಬಂಧನ ಹಾಕುತ್ತೇವೆ. ದಂಡ ವಿಧಿಸುತ್ತೇವೆ. ಒಂದಿಷ್ಟು ದಿನ ನಿಮ್ಮ ದುಡಿಮೆ ಬಂದ್ ಮಾಡಿದರೆ ಏನೂ ಆಗಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ ಎನ್ನಲಾಗಿದೆ.
ತಾಲೂಕಿನ ರಾಮಾಪುರ ಗ್ರಾಮದಲ್ಲಿ ಸುಮಾರು 8-10 ಕುಟುಂಬಗಳವರು ಹೈನುಗಾರಿಕೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದು, ಇವರಲ್ಲಿ ಐದಾರು ಜನರು ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿನ ಮನೆ ಮನೆಗೆ ತೆರಳಿ ಹಾಲು ಮಾರುತ್ತಾರೆ. ಆದರೀಗ ಹುಬ್ಬಳ್ಳಿಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಸುತ್ತಮುತ್ತಲಿನ ಗ್ರಾಮದವರು ಆತಂಕಕ್ಕೊಳಗಾಗಿ ಹುಬ್ಬಳ್ಳಿಗೆ ಹೋಗುವವರನ್ನು ತಡೆಹಿಡಿದಿದ್ದಾರೆ. ಹಾಲು ಮಾರಾಟ ಬಂದ್ ಮಾಡಿ. ಗ್ರಾಮದಲ್ಲೇ ಇರಿ. ನಗರಕ್ಕೆ ಹೋದರೆ ವಾಪಸ್ ಗ್ರಾಮಕ್ಕೆ ಬರಬೇಡಿ ಎಂದು ಕಟ್ಟಪ್ಪಣೆ ಹಾಕಿದ್ದಾರೆಂದು ತಿಳಿದು ಬಂದಿದೆ.
ಹೀಗಾಗಿ ಕಳೆದ 2-3 ದಿನಗಳಿಂದ ಹುಬ್ಬಳ್ಳಿಗೆ ಬರುವುದನ್ನೆ ನಿಲ್ಲಿಸಿದ್ದಾರೆ. ಈ ಗ್ರಾಮದವರು ಪ್ರತಿದಿನ ಕನಿಷ್ಟ 200 ಲೀಟರ್ ಹಾಲನ್ನು ಹುಬ್ಬಳ್ಳಿ ನಗರದಲ್ಲಿ ಮನೆ ಮನೆಗಳಿಗೆ ಪೂರೈಸುತ್ತಿದ್ದರೆಂದು ತಿಳಿದು ಬಂದಿದೆ.
ಹುಬ್ಬಳ್ಳಿಗೆ ಹಾಲು ಮಾರಲು ಹೋಗಬೇಡಿ ಎಂದು ಕಟ್ಟಪ್ಪಣೆ ಮಾಡಿದ್ದರಿಂದ ಹೋಗುವುದುನಿಲ್ಲಿಸಿದ್ದೇವೆ. ಕಾರಣ ಹಾಲು ಉಳಿಯುತ್ತಿದೆ. ಡೈರಿಯವರಿಗೆ ಕೊಡಬೇಕೆಂದರೆ ಅವರು ಕಾಯಂ ಕೊಡುವವರಿಂದ ಮಾತ್ರ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಉಳಿದ ಹಾಲನ್ನು ಮನೆಗೆ ಹಾಗೂ ಗ್ರಾಮದ ಕೆಲವರಿಗೆ ಕೊಡುತ್ತಿದ್ದೇವೆ. ಉಳಿದಿದ್ದನ್ನು ಕರುವಿಗೆ ಬಿಡುತ್ತಿದ್ದೇವೆ. ಹುಬ್ಬಳ್ಳಿಯಲ್ಲೂ ಒಂದಿಷ್ಟು ಜನ ಮೇ 3ರವರೆಗೂ ಹಾಲು ಕೊಡುವುದು ಬೇಡವೆಂದು ಹೇಳಿದ್ದಾರೆ. ನಮ್ಮ ದುಡಿಮೆ ಸಂಪೂರ್ಣ ನಿಂತು ಹೋಗಿದೆ.
– ಹೆಸರು ಹೇಳಲಿಚ್ಚಿಸದ ರಾಮಾಪುರದ ಹಾಲು ಮಾರಾಟಗಾರ
-ಶಿವಶಂಕರ ಕಂಠಿ