Advertisement

ಕೋವಿಡ್-19 ಆತಂಕ: ಬಿಕೋ ಎನ್ನುತ್ತಿದ್ದ ಸರಕಾರಿ ಕಚೇರಿಗಳು

11:18 AM Mar 22, 2020 | mahesh |

ಮಹಾನಗರ: ಕೋವಿಡ್-19 ಆತಂಕ ಹಿನ್ನೆಲೆಯಲ್ಲಿ ಬಹುತೇಕ ಸರಕಾರಿ ಸೇವೆಗಳನ್ನು ಮಾರ್ಚ್‌ 31ರ ವರೆಗೆ ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸರಕಾರಿ ಕಚೇರಿಗಳು ಬಿಕೋ ಎನ್ನುತ್ತಿತ್ತು.

Advertisement

ಮಹಾನಗರ ಪಾಲಿಕೆ ಕಚೇರಿಯ ಎದುರು ಮೂರು ಕೌಂಟರ್‌ ಹಾಕಲಾಗಿತ್ತು. ಹೊಸ ಉದ್ದಿಮೆ ಪರವಾನಗಿ, ನವೀಕರಣ ಪರವಾನಗಿ, ಜನನ ಮತ್ತು ಮರಣ ಪ್ರಮಾಣ ಪತ್ರ ಹಾಗೂ ಇತರೇ ಯಾವುದೇ ಮಾಹಿತಿ ಕೋರಿ ಆಗಮಿಸುವ ಈಗಾಗಲೇ ಮನವಿ/ಅರ್ಜಿಸಲ್ಲಿಸಿದ ಅರ್ಜಿದಾರರು, ಸಾರ್ವಜನಿಕರ ಅರ್ಜಿಗಳನ್ನು ಹಾಕಲು ಪಾಲಿಕೆ ಮುಂಭಾಗದಲ್ಲಿ ಪೆಟ್ಟಿಗೆಯನ್ನು ಇಡಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದ್ದರೂ ಅಧಿಕಾರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರು. ಮಂಗಳೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಗಿ ನೋಂದಣಿ ಸ್ಥಗಿತಗೊಂಡಿತ್ತು. ಲೈಸನ್ಸ್‌ ಸಂಬಂಧಿತ ಬಹುತೇಕ ಕಾರ್ಯ ನಡೆಯುತ್ತಿರಲಿಲ್ಲ.

ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಮುಂದೂಡುವಂತೆ ಸರಕಾರ ಮನವಿ ಮಾಡಿದೆ. ಇದರೊಂದಿಗೆ ಬಹುತೇಕ ದೇವಸ್ಥಾನಗಳಲ್ಲಿ ದೈನಂದಿನ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು.

ಪ್ರಯಾಣಿಕರ ಸಂಖ್ಯೆ ಕಡಿಮೆ
ನಗರದಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಸೆಂಟ್ರಲ್‌ ಮಾರುಕಟ್ಟೆಯಲ್ಲಿಯೂ ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಕೆಎಸ್ಸಾರ್ಟಿಸಿ, ಸಿಟಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಇದೇ ಕಾರಣಕ್ಕೆ ಕೆಲವೊಂದು ಬಸ್‌ ಟ್ರಿಪ್‌ಗ್ಳನ್ನು ಕಡಿಗೊಳಿಸಲಾಗಿತ್ತು. ಬಹುತೇಕ ರೈಲ್ವೇ ಸಂಪರ್ಕ ಕಡಿತಗೊಂಡ ಕಾರಣ, ರೈಲು ನಿಲ್ದಾಣವೂ ಬಿಕೋ ಎನ್ನುತ್ತಿತ್ತು.

Advertisement

ತಪಾಸಣೆ ಮುಂದುವರಿಕೆ
ಕೊರೊನಾ ಭೀತಿ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಅಧಿಕಾರಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಕಚೇರಿಗೆ ತೆರಳುವ ಅಧಿಕಾರಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ತಪಾಸಣೆ ನಡೆಸಲಾಗಿದೆ. ಅದೇ ರೀತಿ ನಗರದ ರೈಲು ನಿಲ್ದಾಣ, ತಲಪಾಡಿ ಚೆಕ್‌ಪೋಸ್ಟ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next