Advertisement

ಚೀನದ ಆರ್ಥಿಕತೆ ಮೇಲೆ ಕೋವಿಡ್‌ ಹೊಡೆತ ಎಷ್ಟು?

12:05 PM May 23, 2020 | sudhir |

ಬೀಜಿಂಗ್‌: ತಾನು ಪ್ರಸಕ್ತ ಸಾಲಿಗೆ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹಾಕಿಕೊಳ್ಳುವುದಿಲ್ಲವೆಂದು ಚೀನ ಹೇಳಿದೆ. 1990ರಿಂದ ಇಂಥ ಗುರಿಗಳನ್ನು ಹಾಕಿಕೊಳ್ಳುತ್ತಿದ್ದ ಚೀನ ಸರಕಾರ ಈ ಬಾರಿ ಅಂಥ ಯಾವುದೇ ಗುರಿ ಹಾಕಿಕೊಳ್ಳುತ್ತಿಲ್ಲ. ಕೋವಿಡ್‌-19ರ ಪರಿಣಾಮವಾಗಿ ಚೀನದ ಆರ್ಥಿಕತೆ ಮೇಲೆ ಬಲವಾದ ಹೊಡೆತ ಬಿದ್ದಿರುವುದನ್ನು ಇದು ಬಿಂಬಿಸುತ್ತದೆ.

Advertisement

ಸರಕಾರ ನೀಡಿರುವ ನಿರುದ್ಯೋಗಿಗಳ ಸಂಖ್ಯೆ ಐತಿಹಾಸಿಕ ಗರಿಷ್ಠದ ಸನಿಹದಲ್ಲಿದೆ ಮತ್ತು ನಿಜ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು. ಚೀನದ ಆರ್ಥಿಕ ಅಂಕಿ-ಅಂಶಗಳನ್ನು ಯಾವಾಗಲೂ ನಂಬಲು ಸಾಧ್ಯವಿಲ್ಲವೆಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಚೀನದಲ್ಲಿ ಈಗ ಕೋವಿಡ್‌ ಹತೋಟಿಗೆ ಬಂದಿರುವುದರಿಂದ ಕಾರ್ಖಾನೆಗಳು ಮರಳಿ ಕಾರ್ಯಾರಂಭಿಸಿವೆ. ಎಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆ ನಿರೀಕ್ಷೆ ಮೀರಿ ಶೇ. 3.9ರಷ್ಟು ವೃದ್ಧಿಯಾಯಿತು. ಪ್ರಸಕ್ತ ಸಾಲಿನ ಮೊದಲ ಎರಡು ತಿಂಗಳುಗಳಲ್ಲಿ ಬೃಹತ್‌ ಲಾಕ್‌ಡೌನ್‌ಗಳು ಜಾರಿಯಲ್ಲಿದ್ದ ವೇಳೆ ಕೈಗಾರಿಕಾ ಉತ್ಪಾದನೆಯಲ್ಲಿ ಶೇ. 13.5ರಷ್ಟು ಕುಸಿತ ದಾಖಲಾಗಿತ್ತು.

ದೇಶದ ಆರು ಬೃಹತ್‌ ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಮರಳಿ ಹಿಂದಿನಷ್ಟೇ ಕಲ್ಲಿದ್ದಲನ್ನು ಬಳಸಲಾರಂಭಿಸಿದ್ದು ವಿದ್ಯುತ್‌ ಬೇಡಿಕೆ ಸಹಜ ಸ್ಥಿತಿಗೆ ಮರಳಿರುವುದನ್ನು ಇದು ಸಂಕೇತಿಸುತ್ತದೆ.

ಲಾಕ್‌ಡೌನ್‌ ಬಳಿಕ ಮಾಲಿನ್ಯ ಮುಕ್ತವಾಗಿದ್ದ ಚೀನದ ಆಗಸ ಮತ್ತೆ ಮಾಲಿನ್ಯಭರಿತವಾಗಿದೆ. ಚೀನದ ಕೈಗಾರಿಕೆಗಳು ಹೊಮ್ಮಿಸುವ ಹೊಗೆಯಿಂದಾಗಿ ವಾಯುಮಾಲಿನ್ಯ ಮಟ್ಟ ಕೋವಿಡ್‌ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿ ಕಳೆದ ವರ್ಷ ಇದೇ ಸಮಯದಲ್ಲಿದ್ದ ಮಟ್ಟವನ್ನು ಮೀರಿಸಿದೆ. ಇವೆಲ್ಲ ಚೀನ ಮತ್ತೆ ಯಥಾಸ್ಥಿತಿಗೆ ಬರುವುದನ್ನು ಸೂಚಿಸುತ್ತವೆ.

Advertisement

ಆದರೆ ಪರಿಸ್ಥಿತಿ ಮೇಲ್ನೋಟಕ್ಕೆ ಕಾಣುವಷ್ಟು ಚೆನ್ನಾಗಿಲ್ಲ. ಜನರು ಅಂಗಡಿಗಳಿಗೆ ಬಂದು ಖರೀದಿಗಳನ್ನು ನಡೆಸುವಂತೆ ಮಾಡಲು ಎಷ್ಟು ಕಷ್ಟವಿದೆಯೆಂದು ಈಚಿನ ಚಿಲ್ಲರೆ ಮಾರಾಟ ಅಂಕಿ-ಅಂಶಗಳು ಸೂಚಿಸುತ್ತವೆ. ಎಪ್ರಿಲ್‌ನಲ್ಲಿ ಮಾರಾಟ ಪ್ರಮಾಣ ಶೇ. 7.5ರಷ್ಟು ಕುಸಿತ ಕಂಡಿದೆ. ಅನೇಕ ಜನರು ಸೋಂಕಿನ ಎರಡನೆ ಅಲೆ ಕುರಿತು ಚಿಂತಿತರಾಗಿದ್ದು, ಈ ಹಿಂದಿನಷ್ಟು ಹಣ ಖರ್ಚು ಮಾಡುತ್ತಿಲ್ಲ.

ಕೋವಿಡ್‌ನಿಂದಾಗಿ ಉಂಟಾಗಿರುವ ಬಿಕ್ಕಟ್ಟು ಎಷ್ಟು ಗಾಢವಾದುದೆಂದು ಅರಿತಿರುವ ಸರಕಾರ, ಈ ವರ್ಷ ಅಭಿವೃದ್ಧಿ ಗುರಿಯನ್ನು ತೊರೆದಿರುವುದಲ್ಲಿ ಅಚ್ಚರಿಯೇನಿಲ್ಲ.

ನಿರುದ್ಯೋಗಿಗಳ ಸಂಖ್ಯೆ ಶೇ, 6ರಷ್ಟು ಹೆಚ್ಚಾಗಿದ್ದು ಐತಿಹಾಸಿಕ ಗರಿಷ್ಠ ಮಟ್ಟದ ಸನಿಹಕ್ಕೆ ಬಂದಿದೆ. ವಲಸೆ ಕಾರ್ಮಿಕರಲ್ಲಿ ಸುಮಾರು ಐದನೆ ಒಂದರಷ್ಟು ಮಂದಿ ನಗರಗಳಿಗೆ ಮರಳದಿರುವುದರಿಂದ ನಿಜವಾದ ನಿರುದ್ಯೋಗಿಗಳ ಪ್ರಮಾಣ ಇದರ ಎರಡು ಪಟ್ಟು ಇರಬಹುದೆಂದು ಅಂದಾಜಿಸಲಾಗಿದೆ. ಈ ವರ್ಷ ಖಾಸಗಿ ಕ್ಷೇತ್ರದಲ್ಲಿರುವ ನೌಕರರಿಗೆ ಕಳೆದ ವರ್ಷ ಗಳಿಸುತ್ತಿದ್ದಷ್ಟು ಸಂಬಳವನ್ನು ಪಡೆಯಲು ಸಾಧ್ಯವಾಗದೆಂದು ಚೀನದ ಕಮ್ಯೂನಿಸ್ಟ್‌ ಮುಖವಾಣಿ “ಗ್ಲೋಬಲ್‌ ಟೈಮ್ಸ್‌’ ಹೇಳಿದೆ.

ಶೇ. 85 ಖಾಸಗಿ ಸಂಸ್ಥೆಗಳು ಮುಂದಿನ ಮೂರು ತಿಂಗಳುಗಳ ಕಾಲ ಬದುಕುಳಿಯುವುದಕ್ಕೆ ಒದ್ದಾಡಬೇಕಾಗುವುದು. ಸಂಸ್ಥೆಗಳು ದಿವಾಳಿಯಾದಲ್ಲಿ ನಿರುದ್ಯೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪೀಕಿಂಗ್‌ ಯೂನಿವರ್ಸಿಟಿಯ ಪ್ರೊ| ಜಸ್ಟಿನ್‌ ಯಿಫ‌ು ಲಿನ್‌ ಹೇಳುತ್ತಾರೆ.

ಚೀನದ ಈಗಿನ ಆರ್ಥಿಕ ಪರಿಸರ ಅದು ಈಚಿನ ವರ್ಷಗಳಲ್ಲಿ ಎದುರಿಸಿದ ಅತಿಹೆಚ್ಚು ಸವಾಲಿನದ್ದಾಗಿದೆ. ಚೀನದ ಕಮ್ಯೂನಿಸ್ಟ್‌ ಪಕ್ಷ ದೇಶ ಎಷ್ಟು ಚೆನ್ನಾಗಿ ಮುಂದುವರಿಯುತ್ತಿದೆಯೆಂದು ಬಿಂಬಿಸುವುದಕ್ಕೆ ಯಾವಾಗಲೂ ಸಾಧಿಸಬೇಕಾದ ಆರ್ಥಿಕ ವೃದ್ಧಿಯ ಗುರಿಯೊಂದನ್ನು ತಿಳಿಸುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ.

ಚೀನದ ಉದ್ದಿಮೆಗಳು ಒಂದು ವೇಳೆ ಮತ್ತೆ ಪೂರ್ಣ ಪ್ರಮಾಣದಿಂದ ಉತ್ಪಾದನೆಗೆ ತೊಡಗಿದರೂ ಜಗತ್ತಿನ ಉಳಿದ ಭಾಗ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ಹಾಗಾಗಿ ಗ್ರಾಹಕ ಬೇಡಿಕೆ ಬರುವ ಸಾಧ್ಯತೆಯಿಲ್ಲ ಮತ್ತು ವಿದೇಶ ವ್ಯಾಪಾರದ ಅವಕಾಶಗಳು ಕಡಿಮೆ. ಕೋವಿಡ್‌-19 ದೇಶದ ಆರ್ಥಿಕ ಸ್ಥಿರತೆಗೆ ಒಂದು ಬಹುದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.

ವೈರಸ್‌ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತ್ತು ವಿಚಾರ ಬಚ್ಚಿಟ್ಟು ವಿವಿಧ ರಾಷ್ಟ್ರಗಳ ಸಿಟ್ಟಿಗೆ ಗುರಿಯಾಗಿರುವ ಚೀನದಿಂದ ಬೃಹತ್‌ ಉದ್ಯಮಗಳು ಕಾಲೆ¤ಗೆಯುತ್ತಿವೆ. ಇದು ಭವಿಷ್ಯದಲ್ಲಿ ಚೀನದ ಆರ್ಥಿಕತೆಯ ಮೇಲೆ ಬಲುದೊಡ್ಡ ನಕಾರಾತ್ಮಕವಾದ ಪರಿಣಾಮಗಳನ್ನು ಬೀರಲಿದೆ ಎನ್ನುತ್ತಾರೆ ಅರ್ಥ ಶಾಸ್ತ್ರಜ್ಞರು.

ಜಪಾನ್‌ : ಕೆಲವೆಡೆ ಲಾಕ್‌ಡೌನ್‌ ತೆರವು
ಟೋಕಿಯೊ : ಸೋಂಕಿಗೆ ಸಿಲುಕಿ ಬಳಲಿ ಬೆಂಡಾಗಿರುವ ಜಪಾನ್‌ನಲ್ಲಿ ಚೇತರಿಕೆ ಗಾಳಿ ಬೀಸ ತೊಡಗಿರುವುದರಿಂದ ಒಂದು ಹಂತದ ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇದೀಗ ದೇಶದ ಹಾಟ್‌ಸ್ಪಾಟ್‌ಗಳೆಂದೇ ಗುರುತಿಸಿಕೊಂಡಿದ್ದ ಒಸಾಕಾ ಮತ್ತಿತರ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸುವುದಾಗಿ ಸರಕಾರ ಘೋಷಿಸಿದೆ.

ಟೋಕಿಯೋ ಮತ್ತು ಹೊಕ್ಕೆ„ಡೊ ಹೊರತು ಪಡಿಸಿ ಉಳಿದಂತೆ ಒಸಾಕಾ ಮತ್ತು ಪಶ್ಚಿಮದ ಪ್ರಾಂತ್ಯಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ತೆರವುಗೊಳಿಸುವುದರ ಕುರಿತು ತಜ್ಞರ ಜತೆ ಸರಕಾರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next