ಗುಳೇದಗುಡ್ಡ: ಕೋವಿಡ್ 19 ವೈರಸ್ ತಡೆಗೆ ಲಾಕ್‌ಡೌನ್ ಜಾರಿಯಾದಾಗಿನಿಂದ ಎಲ್ಲ ಕಾರ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಪಟ್ಟಣದ ಭಜಂತ್ರಿ ಸಮುದಾಯ ಸಂಕಷ್ಟವನ್ನು ಎದುರಿಸುತ್ತಿವೆ.
ಭಜಂತ್ರಿ ಸಮುದಾಯದಲ್ಲಿ ಭಾಜಾ ಭಜಂತ್ರಿ (ವಾದ್ಯಮೇಳ)ವನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ತಮ್ಮ ಬದುಕಿನ ಕಾಯಕವನ್ನಾಗಿ ಮಾಡಿಕೊಂಡ ಭಾಜಾ ಭಜಂತ್ರಿ (ಊದುವುದು), ಬಾರಿಸುವ ಪಾರಂಪರಿಕ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ.
ಪಟ್ಟಣದಲ್ಲಿ ಶ್ರೀ ಮಂಜುನಾಥ ಬ್ರಾಸ್ ಬ್ಯಾಂಡ್ ಕಂಪನಿ, ಜಯಲಕ್ಷ್ಮೀ ಬ್ರಾಸ್ ಬ್ಯಾಂಡ್, ಜೈ ಹನುಮಾನ್ ಬ್ರಾಸ್ ಬ್ಯಾಂಡ್ ಕಂಪನಿ ಗುಳೇದಗುಡ್ಡದ ಹೊಸಪೇಟೆ, ನಡುವಿನಪೇಟೆ, ತಿಪ್ಪಾಪೇಟೆಗಳಲ್ಲಿವೆ. ಸುಮಾರು 6-8 ಕಂಪನಿಗಳಿವೆ. ಪ್ರತಿ ಕಂಪನಿಗಳಲ್ಲಿ ಸುಮಾರು 15-20 ಜನರಿರುತ್ತಾರೆ. ಇವರೆಲ್ಲರೂ ಎಲ್ಲ ತರಹದ ಹಾಡುಗಳಿಗೆ ವಾದ್ಯ ನುಡಿಸುವ ಪರಿಣತಿ ಹೊಂದಿದ್ದು, ಮದುವೆ, ಮುಂಜಿವೆ, ಸಭೆ ಸಮಾರಂಭ ಹೀಗೆ ಕಾರ್ಯಕ್ರಮಗಳಿಗೆ ತಕ್ಕಂತೆ ವಾದ್ಯ ನುಡಿಸಿ ಬದುಕಿನ ಬಂಡಿ ಸಾಗಿಸುತ್ತಾರೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮದುವೆ, ಶುಭ ಸಮಾರಂಭಗಳು ಹೆಚ್ಚು ನಡೆಯುತ್ತವೆ. ಈ ದಿನದಲ್ಲಿಯೇ ಭಾಜಾ ಭಜಂತ್ರಿ ವಾದ್ಯ ಮೇಳಕ್ಕೆ ಭಾರಿ ಬೇಡಿಕೆಯಿದೆ. ಆದರೆ, ಕೋವಿಡ್ 19 ಹೆಮ್ಮಾರಿಯಿಂದ ಮದುವೆ ಮುಂಜಿಗಳು ರದ್ದಾಗಿದ್ದು, ಕುಲಕಸಬಿನ ಮೇಲೆ ಪೆಟ್ಟು ಬಿದ್ದು ಜೀವನ ನಿರ್ವಹಣೆ ದುಸ್ತರವಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಿರುವ ಭಜಂತ್ರಿ ಕುಟುಂಬ ಅದರಲ್ಲೂ ಬ್ರಾಸ್ ಬ್ಯಾಂಡ್ ಬಾಜಾ ಭಜಂತ್ರಿ ಕುಟುಂಬಗಳ ಬದುಕು ದಯನೀಯ ಸ್ಥಿತಿಗೆ ಬಂದಿದೆ. ಲಾಕ್‌ಡೌನ್ ಕಾರಣ ನಡೆಯಬೇಕಿದ್ದ ಅನೇಕ ಮದುವೆಗಳು ನಿಂತು ಹೋಗಿವೆ. ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಮದುವೆಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ಇದು ಮದುವೆ, ಶುಭ ಸಮಾರಂಭಗಳ ಸೀಜನ್. ಇದನ್ನೆ ಆಶ್ರಯಿಸಿ ಬದುಕುವ ನಮ್ಮ ಬ್ರಾಸ್ ಬ್ಯಾಂಡ್ ಕಂಪನಿ ಈಗ ನಷ್ಟ ಅನುಭವಿಸುವಂತಾಗಿದೆ ಎಂದು ಜಯಲಕ್ಷ್ಮೀ ಬ್ರಾಸ್ ಬ್ಯಾಂಡ್‌ನ ಭೀಮಸಿ ಭಜಂತ್ರಿ ಅಳಲು ತೋಡಿಕೊಂಡಿದ್ದಾರೆ.