ಗಂಗಾವತಿ: ಕೋವಿಡ್ 19 ವೈರಸ್ ಹರಡದಂತೆ ವಿಧಿಸಲಾಗಿರುವ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬೆಳೆದ ಬಾಳೆ ಬೆಳೆಗೆ ಕಿಮ್ಮತ್ತಿಲ್ಲದಂತಾಗಿದೆ.
ಆನೆಗೊಂದಿ ಚಿಕ್ಕಜಂತಗಲ್ ಹಿರೇಜತಂಗಲ್ ಕಡೆಬಾಗಿಲು ಸಂಗಾಪುರ ಹಳೆ ಮಗಾಣಿ ಭೂಮಿಯಲ್ಲಿ ಹೇರಳವಾಗಿ ವಿವಿಧ ತಳಿಯ ಬಾಳೆ ಬೆಳೆಯನ್ನು ಬೆಳೆಯಲಾಗುತ್ತದೆ. ಸುಗಂ ಏಲಕ್ಕಿ ಸಕ್ಕರೆ ಸೇರಿ ವಿವಿಧ ತಳಿಯ ಬಾಳೆಯನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ಬೆಳೆದ ಬಾಳೆ ಗೋವಾ, ಮಹಾರಾಷ್ಟ್ರ, ತಮಿಳುನಾಡು ಆಂಧ್ರಪ್ರದೇಶ ತೆಲಗಾಣ ರಾಜ್ಯಗಳಲ್ಲಿ ತುಂಬಾ ಬೇಡಿಕೆ ಇದೆ. ವಿಜಯನಗರ ಕಾಲದಿಂದಲೂ ತಾಲೂಕಿನ ಆನೆಗೊಂದಿ, ಹಿರೇಜಂತಗಲ್ ಹಳೆ ಮಗಾಣಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ತುಂಗಭದ್ರಾ ನದಿಗೆ ಸಾಣಾಪುರ, ಹಿರೇಜಂತಗಲ್ ದೇವಘಾಟ ಕಂಪ್ಲಿ ಹತ್ತಿರ ಆಣೆಕಟ್ಟು ನಿರ್ಮಿಸಿ ಬಾಳೆ ಸೇರಿ ವಿವಿಧ ಹಣ್ಣು ಮತ್ತು ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಇಡೀ ಪ್ರದೇಶವೇ ತೋಟಗಾರಿಕೆ ಬೆಳೆಗಾಗಿ ಮೀಸಲಿಡಲಾಗಿತ್ತು. ಇತ್ತೀಚೆಗೆ ಭತ್ತ ಬೆಳೆಯಲಾಗುತ್ತಿದ್ದು ಸುಮಾರು 500 ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಬಾಳೆ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಭಾರಿ ಬಾಳೆ ಕಟಾವಿಗೆ ಬರುತ್ತದೆ ಎಕರೆ ಬಾಳೆ ಬೆಳೆಯಲು 50-75 ಸಾವಿರ ರೂ.ಖರ್ಚಾಗುತ್ತಿದ್ದು, ಒಳ್ಳೆಯ ದರ ಸಿಕ್ಕರೆ ಎಕರೆ ಖರ್ಚು ತೆಗೆದು 50 ಸಾವಿರ ಉಳಿತಾಯವಾಗುತ್ತದೆ.
ಕೋವಿಡ್ 19 ಕಾರ್ಮೋಡ: ತಾಲೂಕಿನಲ್ಲಿ ಬೆಳೆಯುವ ಬಾಳೆ ಬೆಳೆಗೆ ರಾಜ್ಯದ ವಿವಿಧ ಮಹಾನಗರ ಮತ್ತು ಅನ್ಯ ರಾಜ್ಯಗಳಲ್ಲಿ ಬೇಡಿಕೆ ಇದ್ದು, ಕೊರೊನಾ ರೋಗ ಹರಡದಂತೆ ಕರ್ಫ್ಯೂ ವಿಧಿಸಿರುವುದರಿಂದ ಬಾಳೆ ಖರೀದಿ ಮತ್ತು ಸಾಗಾಣಿಕೆ ಮಾಡಲು ಅಡೆತಡೆ ಇರುವುದರಿಂದ ಕಟಾವಿಗೆ ಬಂದ ಬಾಳೆ ಬೆಳೆ ತೋಟದಲ್ಲಿ ಹಣ್ಣಾಗುತ್ತಿದೆ. ಬಾಳೆ ಬೆಳೆದ ರೈತರ ಕಣ್ಣಲ್ಲಿ ನೀರು ಬರುತ್ತಿದ್ದು, ಸರಕಾರ ಇವರ ನೆರವಿಗೆ ಬರಬೇಕಿದೆ. ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಆಣೆಕಲ್ಲು ಮಳೆಗಾಳಿಗೆ ಬೆಳೆದು ನಿಂತ ಭತ್ತದ ಬೆಳೆ ಪರಿಹಾರವಾಗಿ ಸರಕಾರ ಜಿಲ್ಲೆಗೆ 29 ಕೋಟಿ ರೂ. ಮಂಜೂರಿ ಮಾಡಿದ್ದು, ಇದೀಗ ಬಾಳೆ ಬೆಳೆ ನಷ್ಟವಾಗಿದೆ.
ಆನೆಗೊಂದಿ ಹಿರೇಜಂತಗಲ್ ಹಳೆ ಮಗಾಣಿಯಲ್ಲಿ ಸುಗಂ ಏಲಕ್ಕಿ ಸಕ್ಕರೆ ಬಾಳೆ ಹೇರಳವಾಗಿ ಪುರಾತನ ಕಾಲದಿಂದಲೂ ಬೆಳೆಯಲಾಗುತ್ತಿದೆ. ಹುಬ್ಬಳ್ಳಿ, ಡಾವಗೇರಿ, ಬೆಂಗಳೂರು ಮೈಸೂರು ಸೇರಿ ಅನ್ಯ ರಾಜ್ಯಗಳಿಗೂ ಇಲ್ಲಿ ಬೆಳೆದ ಬಾಳೆಗೆ ಬೇಡಿಕೆ ಇದೆ. ಈ ಮೊದಲು ಬಾಳೆ, ಕಬ್ಬು, ಶೇಂಗಾ ಬೆಳೆಯಲಾಗುತ್ತಿತ್ತು. ಇಂದು ಭತ್ತ ಮತ್ತು ಬಾಳೆ ಬೆಳೆ ಬೆಳೆಯಲಾಗುತ್ತಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಬಾಳೆ ಖರೀದಿ ಮತ್ತು ಸಾಗಾಣಿಕೆ ಮಾಡಲು ಖರೀದಿದಾರರು ಬರುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ. ಸರಕಾರ ಬಾಳೆ ಬೆಳೆಗಾರರ ನೆರವಿಗೆ ಬರಬೇಕಿದೆ. –
ರುದ್ರಪ್ಪ ಆನೆಗೊಂದಿ, ಬಾಳೆ ಬೆಳೆಗಾರ ರೈತ
-ಕೆ.ನಿಂಗಜ್ಜ