ಭಟ್ಕಳ: ನಗರ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದರಿಂದ ಇಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಪಶ್ಚಿಮ ವಲಯ ಐಜಿಪಿ ದೇಬ್‌ಜ್ಯೋತಿ ರೇ ಹೇಳಿದರು.
ಅವರು ಭಟ್ಕಳಕ್ಕೆ ಆಗಮಿಸಿ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಅಧಿಕಾರಿಗಳ ಹಾಗೂ ಪ್ರಮುಖ ಸಾರ್ವಜನಿಕರ ಸಭೆ ನಡೆಸಿದರು. ಭಟ್ಕಳಕ್ಕೆ ಬರುವುದಕ್ಕೆ ಹಾಗೂ ಭಟ್ಕಳದಿಂದ ಹೊರಗೆ ಹೋಗುವುದಕ್ಕೆ ಯಾವುದೇ ಅವಕಾಶ ನೀಡಲಾಗುವುದಿಲ್ಲ. ಭಟ್ಕಳಕ್ಕೆ ಹೊರಗಿನಿಂದ ಈಗಾಗಲೇ ಬಂದವರಿದ್ದರೆ ಅವರನ್ನು ಸೂಕ್ತ ತಪಾಸಣೆ ಮಾಡಿ ನಿಗಾ ವಹಿಸಲಾಗುವುದು ಎಂದರಲ್ಲದೇ ಭಟ್ಕಳಕ್ಕೆ ಬರುವವರನ್ನು ತಡೆಯಲಾಗುವುದು ಎಂದೂ ಹೇಳಿದರು.
ಭಟ್ಕಳದಲ್ಲಿ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಅದಕ್ಕೆ ಯಾವುದೇ ರೀತಿಯ ಆಸ್ಪದ ಕೊಡಬಾರದು. ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ವೈದ್ಯಾಧಿಕಾರಿಗಳು ಹಾಗೂ ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಯಾವುದೇ ಖಾಸಗಿ ವೈದ್ಯರು ಕೋವಿಡ್-19 ಸಂಶಯಿತರಿದ್ದರೆ ತಪಾಸಣೆ ಮಾಡುವುದು, ಔಷಧ ನೀಡುವುದು ತಪ್ಪು. ಅಂತಹ ಸಂಶಯಿತರಿದ್ದತೆ ತಕ್ಷಣ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಎಸ್.ಪಿ. ಶಿವಪ್ರಕಾಶ ದೇವರಾಜು ಮಾತನಾಡಿ, ಪಟ್ಟಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸರ್ವೇ ಮಾಡಲು ಆರಂಭಿಸಲಾಗುವುದು. ಎಲ್ಲರೂ ಕೂಡಾ ಸರಿಯಾದ ಮಾಹಿತಿ ಕೊಟ್ಟು ಸಹಕರಿಸಬೇಕು. ಯಾವುದೇ ರೀತಿಯ ಪ್ರತಿರೋಧ ಮಾಡುವುದು ಸರಿಯಲ್ಲ. ಪ್ರತಿರೋಧ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್., ಡಿವೈಎಸ್‌ಪಿ ಗೌತಮ್ ಕೆ.ಸಿ, ತರಬೇತಿಯಲ್ಲಿರುವ ಪಿಎಸ್‌ಐ ಶಾಹಿಲ್ ಬಾಗ್ಲಾ, ನೊಡೆಲ್ ಅಧಿಕಾರಿ ಡಾ| ಶರದ್ ನಾಯಕ, ಡಾ| ಸವಿತಾ ಕಾಮತ್, ತಹಶೀಲ್ದಾರ್ ಎಸ್. ರವಿಚಂದ್ರ, ಡಾ| ಮೂರ್ತಿರಾಜ ಭಟ್ಟ, ಸಿಪಿಐ ರಾಮಚಂದ್ರ ನಾಯಕ, ತಂಜೀಂ ಪ್ರಮುಖ ಇನಾಯಿತುಲ್ಲಾ ಶಾಬಂದ್ರಿ, ಶಾಂತರಾಮ ಭಟ್ಕಳ, ಶಿವಾನಿ ಶಾಂತಾರಾಮ್, ಸುಬ್ರಾಯ ದೇವಾಡಿಗ, ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ಎಂ.ಆರ್. ಮಾನ್ವಿ, ಇಮ್ರಾನ್ ಲಂಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.