Advertisement

ಕೋವಿಡ್‌-19 ಮರಣ ಪ್ರಮಾಣ : ಉಡುಪಿ ಜಿಲ್ಲೆ ರಾಜ್ಯದಲ್ಲೇ ಕನಿಷ್ಠ: ಡಿಸಿ

10:50 PM Oct 10, 2020 | mahesh |

ಉಡುಪಿ: ಕೋವಿಡ್‌ 19ನಿಂದ ಜಿಲ್ಲೆಯಲ್ಲಿ ಮರಣ ಹೊಂದಿರುವವರ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು ರಾಜ್ಯದಲ್ಲಿ ಈ ಸಾಧನೆ ಮಾಡಿರುವ 3 ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದೆ. ಆದರೆ ಉಳಿದ ಎರಡು ಜಿಲ್ಲೆಗಳಲ್ಲಿ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಸಾವಿನ ದವಡೆಯಲ್ಲಿದ್ದ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಂತಹ ರೋಗಿಗಳಿಗೆ ಇಲ್ಲೇ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕೆ ಮುಖ್ಯ ಮುಖ್ಯ ಕಾರಣ ಜಿಲ್ಲೆಯ ಕೋವಿಡ್‌ ಫ್ರಂಟ್ ಲೈನ್‌ ವಾರಿಯರ್ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮೆಚ್ಚುಗೆ ಸೂಚಿಸಿದರು. ಶನಿವಾರ ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್‌ ಫ್ರಂಟ್ ಲೈನ್‌ ವಾರಿಯರ್‌ಗಳಿಗೆ ಜಿಲ್ಲಾಡಳಿತದಿಂದ ಆಯೋಜಿಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Advertisement

ವಾರಿಯರ್‌ಗಳ ಕೊಡುಗೆ
ಫ್ರಂಟ್‌ ಲೈನ್‌ ವಾರಿಯರ್‌ಗಳಾಗಿ ಸರಕಾರಿ ವೈದ್ಯರು, ಆರೋಗ್ಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ತಜ್ಞ ತಂಡದ ವೈದ್ಯರು, ತಹಶೀಲ್ದಾರ್‌, ಸಿಇಒ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಯಶಸ್ವಿ ನಿರ್ವಹಣೆ, ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್‌ ಮರಣ ಪ್ರಮಾಣ ಕಡಿಮೆಯಾಗಿದೆ. ಇದರ ಜತೆ ವಾರಿಯರ್ಗಳ ಸುರಕ್ಷೆಗೆ ಸಹ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳ ಉತ್ತಮ ಸಹಕಾರದಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ವಾಂತಂತ್ರ್ಯ ದಿನಾಚರಣೆ ದಿನ ಅನಾರೋಗ್ಯದ ಕಾರಣ ಕೋವಿಡ್‌ ವಿರುದ್ದ ಹೋರಾಟದಲ್ಲಿ ಕಾರ್ಯ ನಿರ್ವಹಿಸಿದ ಸಾಧಕರಿಗೆ ಜಿಲ್ಲಾಡಳಿತ ನೀಡಿದ ಪ್ರಶಸ್ತಿ ಸ್ವೀಕರಿಸದ ಜಿಲ್ಲಾ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ಅವರಿಗೆ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಕಂದಾಯ ಸೇವೆ-ಉಡುಪಿ ಪ್ರಥಮಕಂದಾಯ ಇಲಾಖೆ ಸೇವೆಗಳಲ್ಲಿ ಕಳೆದ 12 ತಿಂಗಳಿಂದ ರಾಜ್ಯದಲ್ಲೇ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಹೆಯ ಕುಲಪತಿ ಲೆ| ಜನರಲ್‌ ಡಾ| ವೆಂಕಟೇಶ್‌, ರೋಟರಿಯ ಅಭಿನಂದನ ಶೆಟ್ಟಿ ಅವರು ಮಾತನಾಡಿದರು. ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಎಚ್‌ಒ ಡಾ| ಸುಧೀರ್‌ ಚಂದ್ರ ಸೂಡ, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಉಪಸ್ಥಿತರಿದ್ದರು.  ಡಾ| ಪ್ರಶಾಂತ ಭಟ್‌ ಸ್ವಾಗತಿಸಿದರು, ಡಾ| ಪ್ರೇಮಾನಂದ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next