ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಯಿಂದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಪುರುಷರು ಕೋವಿಡ್ ಗೆ ಬಲಿಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಇಬ್ಬರು ಮೃತರು ಸೇರಿ ಶುಕ್ರವಾರ ಒಟ್ಟು 20 ಜನರಿಗೆ ಕೋವಿಡ್ ದೃಢಪಟ್ಟಿದೆ. ನಗರದ ಎಂಎಸ್ ಕೆ ಮಿಲ್ ಪ್ರದೇಶದ 53 ವರ್ಷದ ವ್ಯಕ್ತಿ (ಪಿ 6323) ಮತ್ತು ಚಿಂಚೋಳಿ ತಾಲೂಕಿನ ಕೆರಳ್ಳಿ ಗ್ರಾಮದ 48 ವರ್ಷದ ವ್ಯಕ್ತಿ ಜೂ.10ರಂದೇ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದೀಗ ಈ ಇಬ್ಬರಿಗೂ ಕೋವಿಡ್ ದೃಢಪಟ್ಟಿದೆ. ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಜೂ.9ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಜಿಲ್ಲೆಯಲ್ಲಿ ಮೊದಲಿಗೆ ಮಾ.10ರಂದು ಕಲಬುರಗಿ ನಗರದ 76 ವರ್ಷದ ವೃದ್ಧ ಕೋವಿಡ್ ಗೆ ಬಲಿಯಾಗಿದ್ದ. ಇದು ದೇಶದಲ್ಲೇ ಕೋವಿಡ್ ಸೋಂಕಿಗೆ ದಾಖಲಾದ ಮೊದಲ ಸಾವಾಗಿತ್ತು. ಜೂ.4ರಂದು ಆಳಂದದ 17 ವರ್ಷದ ವಿದ್ಯಾರ್ಥಿನಿ ಕೋವಿಡ್ ಗೆ ತುತ್ತಾಗಿದ್ದಳು. ಈ ಮೂಲಕ ರಾಜ್ಯದಲ್ಲೇ ಅತಿ ಕಿರಿಯ ಸೋಂಕಿತೆ ಬಲಿಯಾದ ಕುಖ್ಯಾತಿ ಸಹ ಜಿಲ್ಲೆಗಿದೆ.
800ರ ಗಡಿ ದಾಟಿದ ಸೋಂಕಿತರು: ಶುಕ್ರವಾರ ಪತ್ತೆಯಾದ 20 ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 816ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ವಾಪಸ್ ಆಗಿರುವ 16 ಜನರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಇಬ್ಬರಿಗೂ ಸೋಂಕು ಕಾಣಿಸಿಕೊಂಡಿದೆ.
ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಮತ್ತು ಫರತಾಹಬಾದ್ ಗ್ರಾಮದಲ್ಲಿ ತಲಾ ಮೂವರು, ಕಮಲಾಪುರ ತಾಲೂಕಿನ ಗೊಬ್ಬುರವಾಡಿ ಗ್ರಾಮದಲ್ಲಿ ಐವರು, ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಹಾಗೂ ಕರಜಗಿ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಇನ್ನು, ಶುಕ್ರವಾರ ಒಂದೇ ದಿನ 60 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೂ 345 ಜನರು ಬಿಡುಗಡೆಗೊಂಡಂತೆ ಆಗಿದೆ. ಉಳಿದ 461 ಜನ ಸೋಂಕಿತರು ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.