Advertisement
ಹಸುವಿನ ಸಗಣಿ ಬಳಸಿದರೆ ಕೋವಿಡ್ 19 ಸೋಂಕು ತಡೆಗಟ್ಟುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಅದು ಪರಿಣಾಮಕಾರಿಯೂ ಅಲ್ಲ. ಇದರಿಂದ ಬೇರೆ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
Related Articles
ಗುಜರಾತ್ ನಲ್ಲಿ ಕೆಲವರು ಹಸುವಿನ ಕೊಟ್ಟಿಗೆಗೆ ತೆರಳಿ ವಾರಕ್ಕೊಂದು ಬಾರಿ ಗೋ ಮೂತ್ರದೊಂದಿಗೆ ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಕೋವಿಡ್ 19 ಸೋಂಕನ್ನು ತಡೆಗಟ್ಟಬಹುದು ಎಂದು ನಂಬಿದ್ದಾರೆ. ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವ ಥೆರಪಿಯಿಂದ ತಮ್ಮ ದೇಹಕ್ಕೆ ವೈರಸ್ ತಗಲುವುದಿಲ್ಲ ಎಂಬ ನಂಬಿಕೆ ಹೊಂದಿದ್ದು, ಇದು ವೈಜ್ಞಾನಿಕವಾಗಿ ಸಮರ್ಪಕವಾದ ಥೆರಪಿ ಅಲ್ಲ, ಇದು
ಪರಿಣಾಮಕಾರಿಯೂ ಅಲ್ಲ ಎಂದು ಭಾರತದ ವೈದ್ಯರು ತಿಳಿಸಿದ್ದಾರೆ.
Advertisement
ಹಿಂದೂಗಳಿಗೆ ಹಸು ಮತ್ತು ಹಸುವಿನ ಸಗಣಿ ಪವಿತ್ರವಾದದ್ದು, ಮನೆಯನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸುವುದು ಹಿಂದಿನ ಪದ್ಧತಿಯಾಗಿದೆ. ಈಗಲೂ ಹಳ್ಳಿಗಳಲ್ಲಿ ಹಸುವಿನ ಸಗಣಿಗೆ ತುಂಬಾ ಪ್ರಾಮುಖ್ಯತೆ ಇದೆ ಎಂದು ವರದಿ ತಿಳಿಸಿದೆ.
ಸಗಣಿ ಥೆರಪಿ ಪರಿಣಾಮಕಾರಿ?“ನಾವು ಇದನ್ನು ನೋಡಿದ್ದೇವೆ, ವೈದ್ಯರು ಕೂಡಾ ಇಲ್ಲಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಸಗಣಿ ಥೆರಪಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಸುಳ್ಳಲ್ಲ. ಈ ರೀತಿ ಥೆರಪಿ ಮಾಡಿಸಿಕೊಳ್ಳುವವರು ಯಾವುದೇ ಭಯವಿಲ್ಲದೇ ಕೋವಿಡ್ ರೋಗಿಗಳ ಬಳಿ ಹೋಗುತ್ತಾರೆ ಎಂದು ಔಷಧ ಕಂಪನಿಯ ಅಸೋಸಿಯೇಟ್ ಮ್ಯಾನೇಜರ್ ಗೌತಮ್ ಮಣಿಲಾಲ್ ಬೋರಿಸಾ ತಿಳಿಸಿದ್ದಾರೆ. ಈ ಅಭ್ಯಾಸದಿಂದ ಕಳೆದ ವರ್ಷ ಕೋವಿಡ್ 19 ಸೋಂಕಿಗೆ ಒಳಗಾದವರು ಚೇತರಿಸಿಕೊಳ್ಳಲು ಸಹಾಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ. ಈ ರೀತಿ ಥೆರಪಿ ಮಾಡಿಸಿಕೊಂಡು ಸಗಣಿ ಒಣಗುತ್ತದೆ. ನಂತರ ಯೋಗ ಮಾಡುವ ಮೂಲಕ ದೈಹಿಕ ಶಕ್ತಿ ಹೆಚ್ಚುತ್ತದೆ. ಕೊನೆಗೆ ದೇಹವನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ. ಆದರೆ ಕೋವಿಡ್ ಗೆ ಅಧಿಕೃತವಲ್ಲದ ಇಂತಹ ಥೆರಪಿಯನ್ನು ಮಾಡಿಸಿಕೊಳ್ಳಬಾರದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದರಿಂದ ಬೇರೆ, ಬೇರೆ ಆರೋಗ್ಯ ಸಮಸ್ಯೆಗಳು ತಲೆದೋರಲು ಕಾರಣವಾಗಬಹುದು ಎಂದು ಹೇಳಿದ್ದಾರೆ. ಗೋಮೂತ್ರ, ಸಗಣಿ ಉಪಯೋಗಿಸುವುದರಿಂದ ಕೋವಿಡ್ ಸೋಂಕು ಎದುರಿಸಲು ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಬಲವಾದ ಪುರಾವೆ ಇಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ತಿಳಿಸಿದ್ದಾರೆ.