ಕಲಬುರಗಿ: ದೇಶದಲ್ಲೇ ಕೋವಿಡ್ 19 ಸೋಂಕಿಗೆ ಮೊದಲು ಬಲಿಯಾದ ಬಿಸಿಲೂರಿನಲ್ಲಿ ಮಹಾಮಾರಿ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ. ರವಿವಾರ ಒಂದೇ ದಿನ ಹತ್ತು ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಈಗಾಗಲೇ ಕೋವಿಡ್ ಹೆಮ್ಮಾರಿಯಿಂದ ತತ್ತರಿಸಿರುವ ಸೂರ್ಯನಗರಿಗೆ ಮಹಾರಾಷ್ಟ್ರದ ಮುಂಬೈನಿಂದ ಬಂದ ವಲಸಿಗರಿಂದಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರವಿವಾರ ಸೋಂಕು ಪತ್ತೆಯಾದ 10 ಜನರಲ್ಲಿ ಆರು ಜನರು ಮುಂಬೈಯಿಂದ ಬಂದವರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತ್ಯ ಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲು ಒಂದು ದಿನಕ್ಕೆ ಅತಿ ಹೆಚ್ಚು ಎಂದರೆ ಎಂಟು ಜನರಿಗೆ ಸೋಂಕು ಪತ್ತೆಯಾಗಿದ್ದವು.
ಮಹಾ ಕಂಟಕ: ಸೌದಿ ಅರೇಬಿಯಾದಿಂದ ಮರಳಿದ 76 ವರ್ಷದ ವೃದ್ಧನ ಮೂಲಕ ಜಿಲ್ಲೆಗೆ ಕೋವಿಡ್ 19 ಮಹಾಮಾರಿ ಕಾಲಿಟ್ಟಿತ್ತು. ಮಾ.10ರಂದು ಈ ವೃದ್ಧ ಮೃತಪಟ್ಟ ವಿಷಯ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಯಾಕೆಂದರೆ, ಇದು ದೇಶದಲ್ಲೇ ಮೊದಲು ಕೋವಿಡ್ 19ಗೆ ಬಲಿಯಾದ ಪ್ರಕರಣವಾಗಿತ್ತು. ವೃದ್ಧನ ಸಾವಿನ ನಂತರ ದೆಹಲಿ ಮಸೀದಿಯಿಂದ ಬಂದವರಿಂದ ಹೆಮ್ಮಾರಿ ಸೋಂಕು ತೀವ್ರವಾಗಿ ಹರಡಿ ಜನರನ್ನು ತತ್ತರಿಸುವಂತೆ ಮಾಡಿತ್ತು. ಇದೀಗ ಮಹಾರಾಷ್ಟ್ರದಿಂದ ಮರಳಿದ ವಲಸಿಗರಿಂದ ಕಂಟಕ ಎದುರಾಗಿದೆ. ಮುಂಬೈಯಿಂದ ಮರಳಿದ ಆರು ಜನ ಸೋಂಕಿತರ ಪೈಕಿ ಮೂವರು ಮಕ್ಕಳು ಸೇರಿದ್ದು, ಆತಂಕ ಹೆಚ್ಚಿಸುವಂತೆ ಮಾಡಿದೆ.
ಆಳಂದ ತಾಲೂಕಿನ ಧಂಗಾಪುರ ಗ್ರಾಮದ 13 ವರ್ಷದ ಬಾಲಕ (ಪಿ-1135), 40 ವರ್ಷದ ವರ್ಷದ (ಪಿ-1137) ಮತ್ತು 55 ವರ್ಷದ ಪುರುಷ (ಪಿ-1138)ನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅದೇ ರೀತಿ ಕಾಳಗಿ ತಾಲೂಕಿನ ಅರಣಕಲ್ ತಾಂಡಾ ಗ್ರಾಮದ 36 ವರ್ಷದ ಪುರುಷ (ಪಿ-1133), 7 ವರ್ಷದ ಬಾಲಕ (ಪಿ-1136)ನಿಗೆ ಸೋಂಕು ಕಾಣಿಸಿಕೊಂಡಿದೆ. ಮುಂಬೈ ವಲಸಿಗರಿಂದ ಚಿಂಚೋಳಿ ತಾಲೂಕಿಗೂ ಕೋವಿಡ್ 19 ಕಾಲಿಟ್ಟಿದ್ದು, ಕುಂಚಾವರಂನ ಸಂಗಾಪುರ ತಾಂಡಾದ 10 ವರ್ಷದ ಬಾಲಕ (ಪಿ-1131)ನಿಗೆ ಮಹಾಮಾರಿ ವಕ್ಕರಿಸಿದೆ. ಇವರೆಲ್ಲರನ್ನು ಆಯಾ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ವೃದ್ಧನಿಂದ ಮತ್ತಿಬ್ಬರಿಗೆ: ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಮೇ 11ರಂದು ಮೃತಪಟ್ಟ 60 ವರ್ಷದ ವೃದ್ಧ (ಪಿ-927)ನ ಸಂಪರ್ಕದಿಂದಲೂ ಮತ್ತೆ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಮೋಮಿನಪುರದ ಸದರ ಮೊಹಲ್ಲಾ ನಿವಾಸಿಗಳಾದ 55 ವರ್ಷದ ಪುರುಷ (ಪಿ-1132) ಹಾಗೂ 50 ವರ್ಷದ ಮಹಿಳೆ (ಪಿ-1134) ಗೆ ಸೋಂಕು ಹರಡಿದೆ. ಮೇ 11ರಂದು ಮೃತಪಟ್ಟ ಈ ವೃದ್ಧನ ಸಂಪರ್ಕದಲ್ಲಿದ್ದ 50 ವರ್ಷದ ಮಹಿಳೆ (ಪಿ-1085)ಗೆ ಶನಿವಾರ ಸೋಂಕು ದೃಢಪಟ್ಟಿತ್ತು.
ಇನ್ನೊಂದು ಪ್ರಕರಣದಲ್ಲಿ ಕಂಟೈನ್ಮೆಂಟ್ ಝೋನ್ ಸಂಪರ್ಕಕ್ಕೆ ಬಂದ ವಿಶಾಲ ನಗರದ 4ನೇ ಕ್ರಾಸ್ ನಿವಾಸಿ, 55 ವರ್ಷದ ಪುರುಷ (ಪಿ-1130)ನಿಗೆ ಕೋವಿಡ್ 19 ಕಾಣಿಸಿಕೊಂಡಿದೆ. ಮತ್ತೂಂದು ಪ್ರಕರಣದಲ್ಲಿ ರೋಜಾ (ಬಿ) ಬಡಾವಣೆಯ 35 ವರ್ಷದ ಪುರುಷ (ಪಿ-1129)ನಿಗೆ ಸೋಂಕು ಪತ್ತೆಯಾಗಿದ್ದು, ಈತನಿಗೆ ಹೇಗೆ ಸೋಂಕು ಹರಡಿತ್ತು ಎಂಬುದನ್ನು ಅ ಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಒಟ್ಟು 104 ಕೋವಿಡ್ 19 ಸೋಂಕಿತರಲ್ಲಿ 51 ಜನರು ಗುಣಮುಖರಾಗಿದ್ದಾರೆ. ಏಳು ಸೋಂಕಿತರು ಮಹಾಮಾರಿಗೆ ತುತ್ತಾಗಿದ್ದಾರೆ. ಉಳಿದಂತೆ 46 ಜನ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ವರು ಗುಣಮುಖ: ಕೋವಿಡ್ 19 ಸೋಂಕಿಗೆ ತುತ್ತಾದ ನಾಲ್ವರು ರವಿವಾರ ಗುಣಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 51 ಜನರು ಕೋವಿಡ್ 19ದಿಂದ ಮುಕ್ತರಾದಂತೆ ಆಗಿದೆ. ಮೇ 1ರಂದು ಕೋವಿಡ್ 19 ದೃಢಪಟ್ಟ ಮೋಮಿನಪುರ ಪ್ರದೇಶದ 20 ವರ್ಷದ ಯುವತಿ (ಪಿ-588), ಮೇ 3ರಂದು ಸೋಂಕು ಕಾಣಿಸಿಕೊಂಡ 13 ವರ್ಷದ ಬಾಲಕಿ (ಪಿ-602), 54 ವರ್ಷದ ಪುರುಷ (ಪಿ-603) ಹಾಗೂ ಸಂತ್ರಾಸವಾಡಿ ಪ್ರದೇಶದ 22 ವರ್ಷದ ಯುವಕ (ಪಿ-611) ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.