ನವದೆಹಲಿ: ಜನಸಾಮಾನ್ಯರಿಗೆ ಮಹತ್ವದ ನಿರಾಳತೆ ಎಂಬಂತೆ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಏಪ್ರಿಲ್ 30ರವರೆಗೆ ಲಾಕ್ ಡೌನ್ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಪಿಪಿಎಫ್ (ಪಬ್ಲಿಕ್ ಪ್ರೊವಿಡೆಂಟ್ ಫಂಡ್) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ(ಎಸ್ ಎಸ್ ವೈ) ಹೂಡಿಕೆದಾರರ ಠೇವಣಿ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸ್ಕೀಮ್ ನ ಠೇವಣಿ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಿದ್ದು, ಈ ನಿರ್ಧಾರದಿಂದ ಕೋಟ್ಯಂತರ ಖಾತೆದಾರರಿಗೆ ಲಾಭವಾಗಲಿದೆ ಎಂದು ವಿವರಿಸಿದೆ.
ಏತನ್ಮಧ್ಯೆ ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಮತ್ತು ಸುಕನ್ಯಾ ಸಮೃದ್ದಿ ಯೋಜನೆಯಡಿ ಗ್ರಾಹಕರು ವಾರ್ಷಿಕವಾಗಿ ಒಂದೂವರೆ ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದಾಗಿದೆ ಎಂದು ತಿಳಿಸಿದೆ.
ಪಿಪಿಎಫ್ ಮತ್ತು ಸುಕನ್ಯಾ ಸಮೃದ್ದಿ ಯೋಜನೆಯ ಖಾತೆಯಲ್ಲಿ ಏಪ್ರಿಲ್ ನಿಂದ ಮಾರ್ಚ್ ವರೆಗೆ ಖಾತೆದಾರರು ಕನಿಷ್ಠ ಠೇವಣಿ ಇಡಬೇಕಾಗಿದೆ. ಆದರೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 24ರಂದು ಲಾಕ್ ಡೌನ್ ಘೋಷಿಸಿದ್ದರು. ಅಲ್ಲದೇ ಲಾಕ್ ಡೌನ್ ಏಪ್ರಿಲ್ 30ರವರೆಗೆ ಮುಂದುವರಿಯಲಿದೆ.
ಈ ಹಿನ್ನೆಲೆಯಲ್ಲಿ ಹಲವು ಠೇವಣಿದಾರರು ಕನಿಷ್ಠ ಠೇವಣಿ ಇಡದ ಖಾತೆದಾರರಿಗೆ ದಂಡ ತೆರಬೇಕಾದ ಪರಿಸ್ಥಿತಿ ಎದುರಿಸುವಂತಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರ ಕನಿಷ್ಠ ಠೇವಣಿ ಇಡುವ ಸಮಯವನ್ನು ಜೂನ್ ವರೆಗೆ ಮುಂದುವರಿಸಿರುವುದಾಗಿ ತಿಳಿಸಿದೆ.