ಇಸ್ಲಾಮಾಬಾದ್: ಪಾಕಿಸ್ಥಾನದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದ್ದು ಅದೀಗ 69 ಸಾವಿರದ ಗಡಿ ದಾಟಿದೆ. ಒಟ್ಟು 1,483 ಮಂದಿ ಮೃತಪಟ್ಟಿದ್ದು, ಈವರೆಗೆ 25,271 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಪ್ರಾಂತ್ಯಗಳಲ್ಲಿ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಅಲ್ಲಿನ ಆಡಳಿತಕ್ಕೆ ತಲೆನೋವು ತಂದಿದೆ. ಕಳೆದ 24 ತಾಸುಗಳಲ್ಲಿ 3 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲೇ ಇದು ಅತಿ ಹೆಚ್ಚು ಎಂದು ಹೇಳಲಾಗಿದೆ.
ಕರಾಚಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಂಧಲೆ
ಏತನ್ಮಧ್ಯೆ ಕೋವಿಡ್‌ನಿಂದಾಗಿ ಮೃತಪಟ್ಟ ರೋಗಿಯೊಬ್ಬನ ಶವವನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಕರಾಚಿಯ ಡಾ|ರುತ್ ಪಾವ್ ಸರಕಾರಿ ಆಸ್ಪತ್ರೆಯಲ್ಲಿ ಗಲಾಟೆಯಾಗಿದ್ದು, ಮೃತನ ಸಂಬಂಧಿಕರು ದಾಂಧಲೆ ನಡೆಸಿದ್ದಾರೆ. ಅವರು ವೈದ್ಯರು ಮತ್ತು ವೈದ್ಯಕೀಯ ಸಿಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ 2.15ರ ಹೊತ್ತಿಗೆ ರೋಗಿಯನ್ನು ಕರೆದುಕೊಂಡು ಬಂದಿದ್ದು ಆತ ಚಿಕಿತ್ಸೆ ವೇಳೆ ಮೃತಪಟ್ಟಿದ್ದ. ಪರೀಕ್ಷೆ ವೇಳೆ ಆತನಿಗೆ ಕೋವಿಡ್ ಇದ್ದಿದ್ದು ಪತ್ತೆಯಾಗಿತ್ತು. ಆದರೆ ಆತನಿಗೆ ಕೋವಿಡ್ ಇರಲಿಲ್ಲ. ಆತ ಸಾಮಾನ್ಯವಾಗಿದ್ದು ಚಿಕಿತ್ಸೆ ಸರಿಯಾಗಿ ನೀಡದೆ ನಿರ್ಲಕ್ಷ್ಯವಹಿಸಲಾಗಿತ್ತು. ಕೋವಿಡ್ ಇಲ್ಲದಿದ್ದರೂ ಇತ್ತು ಎಂದು ಹೇಳಿ ದಾರಿ ತಪ್ಪಿಸಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಶನಿವಾರ ಮೃತನ ಸಂಬಂಧಿಕರು ಸುಮಾರು 70ರಷ್ಟು ಮಂದಿ ಬಂದಿದ್ದು ದಾಂಧಲೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.