ನವದೆಹಲಿ:ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,549 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. 31 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ (ಮಾರ್ಚ್ 21) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಸಗಟು ಡೀಸೆಲ್ ಬೆಲೆ ಲೀಟರ್ ಗೆ 25 ರೂಪಾಯಿ ಹೆಚ್ಚಳ; ಬಂಕ್ ಗಳಲ್ಲಿ ಹಳೆ ದರ
ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 25,106ಕ್ಕೆ ಇಳಿಕೆಯಾಗಿದೆ. ಒಂದೇ ದಿನದಲ್ಲಿ 1,134 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 24ಗಂಟೆಯಲ್ಲಿ 2,652 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶಾದ್ಯಂತ ಈವರೆಗೆ 4,24,67,774 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.74ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಲಸಿಕೆ ಅಭಿಯಾನದಡಿ ಈವರೆಗೆ 181.24 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 24ಗಂಟೆಯಲ್ಲಿ ಸುಮಾರು 3,84,499 ಮಂದಿಯನ್ನು ಪರೀಕ್ಷಿಸಲಾಗಿದೆ ಎಂದು ಅಂಕಿಅಂಶ ವಿವರಿಸಿದೆ.
ಭಾರತದಲ್ಲಿ 4ನೇ ಅಲೆ ತೀವ್ರತೆ ಕಡಿಮೆ:
ದೇಶದಲ್ಲಿ 4ನೇ ಕೋವಿಡ್ ಅಲೆ ತೀವ್ರವಾಗುವ ಸಾಧ್ಯತೆ ತುಂಬಾ ಕಡಿಮೆ ಇದ್ದು, ಮಾಸ್ಕ್ ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರೋಗಿಗಳು ಮತ್ತು ವೃದ್ಧರಿಗೆ ಮಾತ್ರ ಮಾಸ್ಕ್ ಕಡ್ಡಾಯಗೊಳಿಸಬಹುದು ಎಂದು ಹೇಳಿದೆ.