ಬಾಗಲಕೋಟೆ: ಮಹಾಮಾರಿ ಕೋವಿಡ್-19 ವೈರಸ್ ಗೆ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿನ ಕಾರಣದಿಂದ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ 55 ವರ್ಷದ (ಪಿ 10642) ವ್ಯಕ್ತಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಗೆ ಕಳೆದ ಜೂನ್ 26 ರಂದು ಕೋವಿಡ್-19 ಸೋಂಕು ಇರುವುದು ದೃಡಪಟ್ಟಿತ್ತು. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ.
ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ನಗರದ 76 ವರ್ಷದ ವೃದ್ಧ (ಪಿ125) ಕಳೆದ ಏಪ್ರಿಲ್ 3ರಂದು ಮೃತಪಟ್ಟಿದ್ದ. ಇದಾದ ಬಳಿಕ ಜೂ. 23ರಂದು ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿಯ 57 ವರ್ಷದ (ಪಿ 10173) ರೈಲ್ವೆ ಟಿಕೆಟ್ ಕಲೆಕ್ಟರ್ ಮೃತಪಟ್ಟಿದ್ದ.
ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಲೀವರ್ ಸಮಸ್ಯೆಯ ಚಿಕಿತ್ಸೆಗೆಂದು ಬೆಂಗಳೂರಿಗೆ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಮಾದರಿಯನ್ನೂ ಪರೀಕ್ಷೆ ಮಾಡಿದ್ದು, ಮೃತಪಟ್ಟ ಬಳಿಕ ಕೋವಿಡ್-19 ದೃಢಪಟ್ಟಿದೆ. ಶನಿವಾರ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನವನಗರದ ಸೆಕ್ಟರ್ ನಂ. 57ರ 50 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಈ ಸೋಂಕಿಗೆ ಏಪ್ರಿಲ್ ನಲ್ಲಿ ಓರ್ವ ಮೃತ ಪಟ್ಟಿದ್ದರೆ, ಜೂನ್ ಕೊನೆ ವಾರದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಭೀತಿ ದಿನೇ ದಿನೇ ಹೆಚ್ಚುತ್ತಲೇ ಇದೆ.
ಜಿಲ್ಲಾಡಳಿತ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಕೋವಿಡ್ ಕೇಕೆ ಹೆಚ್ವುತ್ತಿದ್ದರೂ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳುತ್ತಿಲ್ಲ. ಶನಿವಾರ ಕೋವಿಡ್ ಗೆ ಬಲಿಯಾದ ನವನಗರದ ಸೆಕ್ಟರ್ ನಂ.57ರ ವ್ಯಕ್ತಿಯ ಮನೆ ಸುತ್ತಲಿನ ಪ್ರದೇಶ ಸೀಲಡೌನ್ ಮಾಡಿಲ್ಲ. ಇಂದು ಅದೇ ಪ್ರದೇಶದಲ್ಲಿ ಒಟ್ಟು ಮೂರು ಮದುವೆಗಳು ಮನೆಯ ಮುಂದೆ ನಡೆದಿವೆ. ಈ ವಿಷಯ ಗೊತ್ತಿದ್ದರೂ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.