Advertisement

ಕೋವಿಡ್ 19 ಹಿನ್ನೆಲೆ: ಕರಾವಳಿಗೆ ಮಳೆಗಾಲ ಎದುರಿಸುವುದೇ ಸದ್ಯದ ದೊಡ್ಡ ಸವಾಲು

11:06 PM Apr 19, 2020 | Sriram |

ವಿಶೇಷ ವರದಿ-ಮಂಗಳೂರು: ಮಾರಕ ಕೋವಿಡ್ 19 ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಷ್ಟರಲ್ಲೇ ಮಳೆಗಾಲ ಬರ ಲಿದ್ದು, ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಹಲವಾರು ಸಮಸ್ಯೆಗಳ ನಡುವೆ ಮಳೆಗಾಲವನ್ನು ಸಮರ್ಥವಾಗಿ ಎದು ರಿಸಲು ಸಿದ್ಧತೆ ಮಾಡಿಕೊಳ್ಳುವ ದೊಡ್ಡ ಸವಾಲು ಜಿಲ್ಲಾಡಳಿತಕ್ಕಿದೆ.

Advertisement

ವಾಡಿಕೆಯಂತೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಕರಾವಳಿ ಭಾಗಕ್ಕೆ ಅಪ್ಪಳಿಸುವ ನಿರೀಕ್ಷೆಯಿದ್ದು, ಮಳೆಗಾಲಕ್ಕೆ ಸಿದ್ಧತೆ ನಡೆಸಬೇಕಿರುವ ರೈತರು ದಾರಿಕಾಣದಾಗಿದ್ದಾರೆ. ಮಳೆ ಆರಂಭಕ್ಕೂ ಮುನ್ನ ಅಡಿಕೆ ಮರಗಳಿಗೆ ಗೊಬ್ಬರ ಹಾಕಬೇಕಾಗುತ್ತದೆ. ತೋಟ ದಿಂದ ಮಳೆ ನೀರು ಸರಾಗವಾಗಿ ಹರಿಯಲು ಕಣಿಯ ಕೆಲಸ ಆಗಬೇಕಿದೆ. ಆದರೆ ಸದ್ಯ ಕಾರ್ಮಿಕರು ಸಿಗುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಿ ಎಂದರೂ ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ ಎನ್ನುತ್ತಾರೆ ಕೃಷಿಕರು.

ಹೆದ್ದಾರಿ ಕಾಮಗಾರಿಗೆ ವೇಗ ನೀಡಿ
ಕಳೆದ ಬಾರಿ ಕರಾವಳಿ, ಮಡಿಕೇರಿ ಭಾಗದಲ್ಲಿ ಭಾರೀ ಮಳೆಗೆ ಪ್ರಮುಖ ಹೆದ್ದಾರಿಗಳು ಅಪಾ ಯಕ್ಕೆ ಸಿಲುಕಿ ದ್ದವು. ಅದರಲ್ಲೂ ಮೂಡಿಗೆರೆ – ಚಿಕ್ಕಮಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯ ಅನೇಕ ಕಡೆಗಳಲ್ಲಿ ಕುಸಿತ ಸಂಭವಿಸಿತ್ತು. ಹಲವು ತಿಂಗಳು ಕಾಲ ವಾಹನ ಸಂಚಾರಕ್ಕೆ ನಿರ್ಬಂಧದ ಬಳಿಕ ಕೆಲವು ತಿಂಗಳಿನಿಂದ ಈಚೆಗೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಿನಿ ಬಸ್‌ ಸಹಿತ ಲಘು ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಅಲೆಕ್ಯಾನ್‌ಗೆàಟ್‌ ಬಳಿ ಅಲೆಕ್ಕಾನ್‌ ಹಳ್ಳದ ಎರಡು ಬದಿಗಳಲ್ಲಿ ಜರಿದಿದ್ದು, ಮಳೆಗಾಲಕ್ಕೂ ಮುನ್ನ ಅಲ್ಲಿ ಸುಮಾರು 50 ಅಡಿಗಳಿಗಿಂತಲೂ ತಳದಿಂದ ಪಿಲ್ಲರ್‌ ನಿರ್ಮಿಸಿ ರಸ್ತೆ ವಿಸ್ತರಣೆ ಆಗಬೇಕಾಗಿದೆ.

ಅದೇ ರೀತಿ ಮಡಿಕೇರಿ-ಮೈಸೂರು ಮೂಲಕ ಬೆಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟಿ ಮತ್ತು ಸಕಲೇಶಪುರ-ಹಾಸನ ಮೂಲಕ ಬೆಂಗಳೂರು ಸಂಪರ್ಕದ ಶಿರಾಡಿ ಘಾಟಿ ರಸ್ತೆಗಳ ಕೆಲವು ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಬೇಕಿವೆ.

ಸದ್ಯ ಲಾಕ್‌ಡೌನ್‌ ಕಾರಣ ವಾಹನ ಸಂಚಾರ ನಿಷೇಧ ಇರುವುದರಿಂದ ಕಾಮಗಾರಿ ಪೂರ್ಣಗೊಳಿಸಲು ಇದು ಸಕಾಲ. ಭಾರೀ ಮಳೆಯಿಂದಾಗಿ ರಸ್ತೆ ಸಂಪರ್ಕ ವ್ಯವಸ್ಥೆ ಬಂದ್‌ ಆದರೆ ಕರಾವಳಿಯ ಮಂದಿ ಕಳೆದ ಬಾರಿಯಂತೆಯೇ ಸಮಸ್ಯೆಗೆ ಸಿಲುಕಬೇಕಾದೀತು.

Advertisement

ನಗರದಲ್ಲೂ ಸಮಸ್ಯೆಗಳ ಸರಮಾಲೆ
2018ರ ಮೇ ಅಂತ್ಯದಲ್ಲಿ ಮಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿತ್ತು. ರಾಜಕಾಲುವೆಯ ಹೂಳೆತ್ತುವ ಕೆಲಸ ಇನ್ನೂ ಆರಂಭವಾಗಲಿಲ್ಲ. ಅದೇ ರೀತಿ ಒಳಚರಂಡಿ ವ್ಯವಸ್ಥೆ, ಸಣ್ಣ ಕಾಲುವೆ ಕಾಮಗಾರಿ, ಮ್ಯಾನ್‌ಹೋಲ್‌ ಕಾಮಗಾರಿ, ರಸ್ತೆ ಡಾಮರು ಕಾಮಗಾರಿ ವೇಗ ಪಡೆಯಬೇಕಿದೆ.

ಅದೇ ರೀತಿ ಪಚ್ಚನಾಡಿಯ ತ್ಯಾಜ್ಯ ಹರಡಿಕೊಂಡಿರುವ ಮಂದಾರದ ನಿರ್ವಸಿತರಿಗೆ ಪರಿಹಾರ ಕಾರ್ಯ ಈಗಷ್ಟೇ ಆರಂಭವಾಗಿದ್ದು, ತ್ಯಾಜ್ಯ ವಿಲೇವಾರಿ ಇನ್ನೂ ಆಗಿಲ್ಲ. ಮಳೆ ಆರಂಭವಾದ ಬಳಿಕ ಮಂದಾರದಲ್ಲಿ ವ್ಯಾಪಿಸಿದ ತ್ಯಾಜ್ಯ ರಾಶಿ ಮತ್ತಷ್ಟು ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ.

ಸಭೆ ಕರೆಯಲಾಗುವುದು
ಇನ್ನೇನು ಕೆಲ ದಿನಗಳಲ್ಲಿಯೇ ಮಳೆಗಾಲ ಆರಂಭವಾಗಲಿದ್ದು, ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಸದ್ಯದಲ್ಲೇ ವಿವಿಧ ಇಲಾಖೆಗಳ ಸಭೆ ಕರೆದು ಮಳೆಗಾಲದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಲಾಗುವುದು.
 - ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

ಕೃಷಿಕರಿಗೆ ಸಂಕಷ್ಟ
ಶೀಘ್ರದಲ್ಲೇ ಮಳೆಗಾಲ ಆರಂಭವಾಗಲಿದೆ. ಈ ನಡುವೆ ಕೋವಿಡ್ 19 ಭೀತಿಯಿಂದ ಕಾರ್ಮಿಕರು ಬರಲೊಪ್ಪದ ಕಾರಣ ಕೃಷಿ ಚಟುವಟಿಕೆಗಳು ಅರ್ಧಕ್ಕೇ ನಿಂತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೃಷಿಕರು ಈ ಬಾರಿ ತುಂಬಲಾರದ ನಷ್ಟ ಅನುಭವಿಸಬೇಕಾದೀತು.
 - ಗಣಪತಿ ಭಟ್‌, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next