ನವದೆಹಲಿ: ಕೋವಿಡ್ ಎರಡನೇ ಅಲೆಯಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿಯ ಹೊಸ ಅವತಾರ ತಾಳಿ ಡೆಲ್ಟಾ ಪ್ಲಸ್ ಎಂಬ ಹೆಸರಿನಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಭಾರತದಲ್ಲಿ ಸುಮಾರು 40 ನೂತನ ರೂಪಾಂತರಿ ಡೆಲ್ಟಾ ಪ್ಲಸ್ ಪ್ರಕರಣ ವರದಿಯಾಗಿರುವುದಾಗಿ ಎಎನ್ ಐ ತಿಳಿಸಿದೆ.
ಇದನ್ನೂ ಓದಿ:ಫೇಸ್ ಬುಕ್ ನಲ್ಲಿ ಪರಿಚಯ: ಬಳಿಕ ಪ್ರೀತಿ-ಮದುವೆ; ಯುವತಿಯ ಮೃತದೇಹ ಪತ್ತೆ !
ಸರ್ಕಾರದ ಮೂಲಗಳ ಪ್ರಕಾರ, ಈ ನೂತನ ಡೆಲ್ಟಾ ಪ್ಲಸ್ ಪ್ರಕರಣಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಪತ್ತೆಯಾಗಿರುವುದಾಗಿ ವಿವರಿಸಿದೆ.
ಇದಕ್ಕೂ ಮುನ್ನ ಮಂಗಳವಾರ(ಜೂನ್ 22) ಡೆಲ್ಟಾ ಪ್ಲಸ್ ರೂಪಾಂತರಿ ಕಳವಳಕಾರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು. ಕೆಲವು ಜಿಲ್ಲೆಗಳಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣ ವರದಿಯಾದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಸಲಹೆ ನೀಡಿತ್ತು.
ಮಹಾರಾಷ್ಟ್ರದ ರತ್ನಗಿರಿ ಮತ್ತು ಜಲ್ ಗಾಂವ್, ಕೇರಳದ ಪಾಲಕ್ಕಾಡ್ ಮತ್ತು ಪಟ್ಟಣಂತಿಟ್ಟಾ ಹಾಗೂ ಮಧ್ಯಪ್ರದೇಶದ ಭೋಪಾಲ್ ಮತ್ತು ಶಿವ್ ಪುರಿಯಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿತ್ತು ಎಂದು ವರದಿ ತಿಳಿಸಿದೆ.
3ನೇ ಅಲೆಗೆ ನಂಟು?: ಅದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ದೇಶದ ಖ್ಯಾತ ವೈರಾಲಜಿಸ್ಟ್ ಪ್ರೊ| ಶಾಹಿದ್ ಜಮೀಲ್. ಆದರೆ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಿಸಿದ ವೇಗ ನೋಡಿದರೆ, 3ನೇ ಅಲೆಯಲ್ಲಿ ಡೆಲ್ಟಾ ಪ್ಲಸ್ ಕೂಡ ವ್ಯಾಪಿಸುವ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.