Advertisement

ಕಾಳ್ಗಿಚ್ಚಿನಿಂದ ನಲುಗಿದವರ ಮೇಲೆ ಕೋವಿಡ್ ಪ್ರಹಾರ

04:09 PM May 12, 2020 | sudhir |

ಮೆಲ್ಬೋರ್ನ್ : ಕಷ್ಟಗಳು ಬಂದರೆ ಬೆನ್ನುಬೆನ್ನಿಗೆ ಬರುತ್ತವೆ ಎನ್ನುತ್ತಾರೆ. ಆಸ್ಟ್ರೇಲಿಯಾದ ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಕಳೆದ ಬೇಸಗೆಯಲ್ಲಿ ಭೀಕರ ಕಾಳ್ಗಿಚ್ಚಿನಿಂದ ಬೆಂದು ಬಸವಳಿದಿದ್ದ ಈ ದೇಶದ ಮೇಲೆ ಕೊರೊನಾ ಮಾರಕ ಪ್ರಹಾರವನ್ನು ನೀಡಿದೆ. ಕಾಳ್ಗಿಚ್ಚಿನ ಬೂದಿಯ ವಾಸನೆ ಮಾಸುವ ಮೊದಲೇ ಜನರು ಕೋವಿಡ್ ತಾಪದಿಂದ ಬಳಲುವಂತಾಗಿರುವುದು ವಿಧಿಯಾಟದಂತೆ ಕಾಣಿಸುತ್ತದೆ.

Advertisement

ಕಾಳ್ಗಿಚ್ಚು ಸಂತ್ರಸ್ತರಿಗೆ ಇನ್ನೂ ಸಹಜ ಜೀವನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಈ ನಡುವೆ ಕೋವಿಡ್ ವಕ್ಕರಿಸಿ ಲಾಕ್‌ಡೌನ್‌ ಹೇರಿದ ಪರಿಣಾಮವಾಗಿ ಬದುಕು ಇನ್ನಷ್ಟು ದುಸ್ತರವಾಗಿದೆ.

ಒಂಟಿ ವೃದ್ಧೆ 73ರ ಹರೆಯದ ಲಿಂಡಿ ಮಾರ್ಶಲ್‌ ಅವರ ಮನೆ ಕಾಡ್ಗಿಚ್ಚಿನಿಂದಾಗಿ ಸುಟ್ಟು ಹೋಗಿತ್ತು. ಈಗ ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟ್‌ ಮನೆಯಲ್ಲಿದ್ದಾರೆ. ಸಾಮಾಜಿಕ ಅಂತರ ಪಾಲಿಸಬೇಕಾದ ಕಾರಣ ಇಲ್ಲಿ ಅವರ ಬದುಕು ಅಸಹನೀಯವಾಗಿದೆ. ನೀರು ಮತ್ತು ಆಹಾರ ಇಲ್ಲಿನ ದೊಡ್ಡ ಸಮಸ್ಯೆ. ಅವರಿಗೆ ವಾರಕ್ಕೆ ಮೂರು ಸಲ ಸ್ನಾನ ಮಾಡಲು ಸಾಕಾಗುವಷ್ಟು ಮಾತ್ರ ನೀರು ಸಿಗುತ್ತದೆ. ಬಟ್ಟೆ ಒಗೆಯಲು ಸಿಗುವುದು ಬರೀ ಒಂದು ಬಾಲ್ದಿ ನೀರು. ಇದು ಲಿಂಡಿ ಮಾರ್ಶಲ್‌ ಅವರೊಬ್ಬರ ದುರಂತ ಕತೆಯಲ್ಲ. ತಾತ್ಕಾಲಿಕ ಟೆಂಟ್‌ಗಳು ಮತ್ತು ಶಿಬಿರಗಳಲ್ಲಿ ಆಶ್ರಯ ಪಡೆದವರೆಲ್ಲ ಈ ಮಾದರಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೂಲಸೌಕರ್ಯ ಕೊರತೆಗಳ ನಡುವೆಯೇ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಹಾಗೂ ಇನ್ನಿತರ ಸುರಕ್ಷಾ ಕ್ರಮಗಳನ್ನು ಪಾಲಿಸುವ ಕಷ್ಟ ಅವರದ್ದು.

ಇದು ಒಂದು ದುಃಸ್ವಪ್ನದಂಥ ಜೀವನ. ಅಂತ್ಯವೇ ಇಲ್ಲದ ಯಾತನಾದಾಯಕ ಪ್ರಯಾಣದಂತೆ ಕಾಣಿಸುತ್ತಿದೆ ಈ ಬದುಕು ಎಂದು ನಿಟ್ಟುಸಿರುಡುತ್ತಾರೆ ಲಿಂಡಿ.

ಲಿಂಡಿ ಅವರಂಥ 3,500ಕ್ಕೂ ಅಧಿಕ ಕುಟುಂಬಗಳು ಈಗ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿವೆ. ನಾಲ್ಕು ತಿಂಗಳು ಬಿಡದೆ ಉರಿದ ಕಾಡ್ಗಿಚ್ಚು ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದರ ಬೆನ್ನಿಗೆ ಅಪ್ಪಳಿಸಿದ ಕೋವಿಡ್ ವೈರಸ್‌ನಿಂದ ಅವರ ಬದುಕು ಸುಂಟರಗಾಳಿಗೆ ಸಿಲುಕಿದ ನಾವೆಯಂತಾಗಿದೆ. ಎಲ್ಲರ ಭವಿಷ್ಯವೂ ಡೋಲಾಯಮಾನವಾಗಿದ್ದು, ಯಾರೂ ಯಾರನ್ನೂ ಸಂತೈಸುವ ಸ್ಥಿತಿಯಲ್ಲಿ ಇಲ್ಲ. ಸ್ವರಕ್ಷಣೆ ಮತ್ತು ಆರೋಗ್ಯವೇ ಅವರ ಮುಖ್ಯ ಸಮಸ್ಯೆ.

Advertisement

ಅಕ್ಕಪಕ್ಕದಲ್ಲಿರುವವರ ಸಂಪರ್ಕಕ್ಕೂ ಬರಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದ ಪರಿಣಾಮವಾಗಿ ಕಾಳ್ಗಿಚ್ಚಿನಿಂದ ನಲುಗಿದವರ ಆರೈಕೆಗೆ ಭಾರೀ ತೊಡಕು ಎದುರಾಗಿದೆ. ಕೋವಿಡ್ ದಿಂದಾಗಿ ಅವರ ಪುನರ್‌ವಸತಿಗೆ ಹಮ್ಮಿಕೊಂಡಿದ್ದ ಯೋಜನೆಗಳೆಲ್ಲ ಸ್ಥಗಿತಗೊಂಡಿವೆ.

ಆತ್ಮಹತ್ಯೆ ಭೀತಿ
ಮನೆಯಿಲ್ಲದಿರುವುದು, ಏಕಾಂತ ವಾಸ, ಸೊತ್ತುಗಳೆಲ್ಲ ಕಳೆದು ಹೋಗಿರುವುದು, ತೀರಾ ಆಪ್ತರನ್ನೂ ಭೇಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿಂದಾಗಿ ನಿರಾಶ್ರಿತ ಶಿಬಿರಗಳಲ್ಲಿ ಆತ್ಮಹತ್ಯೆಯ ಭೀತಿ ತಲೆದೋರುತ್ತಿದೆ. ಜನರು ಸ್ವಯಂ ಹಾನಿ ಮಾಡಿಕೊಳ್ಳಲು ಅಥವಾ ಸಾವಿಗೆ ಶರಣಾಗಲು ಮುಂದಾಗುವ ಸಾಧ್ಯತೆಯಿದೆ ಎಂದು ಮನಃಶಾÏಸ್ತ್ರಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೆಲವು ಆತ್ಮಹತ್ಯೆ ಅಥವಾ ಆತ್ಮಹತ್ಯೆ ಪ್ರಯತ್ನಗಳು ಸಂಭವಿಸಿದ್ದು, ಇದು ಮಾನಸಿಕ ಒತ್ತಡದ ಪರಿಣಾಮ ಎನ್ನಲಾಗುತ್ತಿದೆ.

ಆಸ್ಟ್ರೇಲಿಯದಲ್ಲಿ ಕೋವಿಡ್ ಹಾವಳಿ ತುಸು ಜೋರಾಗಿಯೇ ಇದೆ. ಲಕ್ಷಗಟ್ಟಲೆ ಜನರು ಕೋವಿಡ್ ದಿಂದಾಗಿ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉದ್ಯಮ-ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಜನರಲ್ಲಿ ಖನ್ನತೆ ಕಾಣಿಸಿಕೊಂಡಿದೆ. ದೇಶದ ಆತ್ಮಹತ್ಯೆ ತಡೆ ಸಹಾಯವಾಣಿಗೆ ನಿತ್ಯ ಸುಮಾರು 4000ದಷ್ಟು ಕರೆಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಹಿಂದೆ ಮಾಮೂಲಿ ದಿನಗಳಲ್ಲಿ ದಿನಕ್ಕೆ 30 ಕರೆಗಳು ಬರುತ್ತಿದ್ದವು.

ಶಿಬಿರಗಳಲ್ಲೇ ಜೀವನ
ಕಳೆದ ಸೆಪ್ಟೆಂಬರ್ ನಿಂದ ಮಾರ್ಚ್‌ ತನಕ ಧಗಧಗಿಸಿದ ಕಾಡ್ಗಿಚ್ಚಿಗೆ ಎಕ್ಕರೆಗಟ್ಟಲೆ ಅರಣ್ಯ ಬೂದಿಯಾಗಿರುವುದಲ್ಲದೆ ಸಾವಿರಾರು ಮನೆಗಳೂ ನಾಶವಾಗಿವೆ. ಕೊಬಾರ್ಗೊ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಮನೆಗಳ ಪುನರ್‌ನಿರ್ಮಾಣ ಪೂರ್ಣವಾಗದೆ ಜನರು ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥ ಶಿಬಿರಗಳಲ್ಲಿ ಕೋವಿಡ್ ವೈರಸ್‌ ಹಾವಳಿ ತೀವ್ರಗೊಂಡಿದೆ. ನೈರ್ಮಲ್ಯದ ಕೊರತೆ ಈ ಶಿಬಿರಗಳ ದೊಡ್ಡ ಸಮಸ್ಯೆ. ಹೀಗಾಗಿ ರೋಗಗಳು ಕ್ಷಿಪ್ರವಾಗಿ ಹರಡುತ್ತಿವೆ. ಆಸ್ಟ್ರೇಲಿಯನ್ನರ ಈ ವರ್ಷ ನಮ್ಮ ಪಾಲಿಗೆ ಶಾಪಗ್ರಸ್ತ ವರ್ಷವಾಯಿತು ಎಂದು ನಿಟ್ಟುಸಿರಿಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next