Advertisement

ಇದು ಶ್ರೀಮಂತ ದೇಶದ ಬಡವರ ಪಾಡು

02:57 PM May 11, 2020 | sudhir |

ಮಣಿಪಾಲ: ಜಿನೇವಾದಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್‌ ತುಂಬಾ ಸಮಸ್ಯೆಯನ್ನುಂಟು ಮಾಡಿದೆ. ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಸ್ವಿಜರ್‌ಲ್ಯಾಂಡ್‌ನ‌ ಬಡವವರ ಮೇಲೆ ಕೋವಿಡ್ ಉಂಟು ಮಾಡಿರುವ ಪರಿಣಾಮ ತುಸು ಜೋರಾಗಿಯೇ ಇದೆ. ಬೇರೆ ದೇಶದಿಂದ ಹೋಗಿ ಅಲ್ಲಿ ನೆಲೆಸಿರುವ ವಲಸಿಗರು ಮತ್ತು ಬಡವರು ಕೆಲಸದಿಂದ ವಂಚಿತರಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ.

Advertisement

ಪ್ರತಿನಿತ್ಯ ಉದ್ದದ ಸಾಲುಗಳಲ್ಲಿ ನಿಂತು ಜನರು ಉಚಿತ ಆಹಾರ ಸ್ವೀಕರಿಸುವ ದೃಶ್ಯ ದೇಶದ ಎಲ್ಲೆಡೆ ಕಂಡು ಬರುತ್ತಿದೆ. ಜಿನೇವಾದಲ್ಲಿ ಪ್ರತಿದಿನ ಬೆಳಗ್ಗೆ 1,500 ಆಹಾರದ ಪ್ಯಾಕೇಟ್‌ಗಳನ್ನು ಅಲ್ಲಿನ ಸ್ವಯಂ ಸೇವಕರು ಮುಂಜಾನೆ 5 ಗಂಟೆಯ ಹೊತ್ತಿಗೆ ವಿತರಿಸಲು ಆಗಮಿಸುತ್ತಾರೆ. ಇದಕ್ಕಾಗಿ ಜನರು ಕಿ.ಮೀ. ಉದ್ದದ ಸಾಲುಗಳಲ್ಲಿ ನಿಂತು ಕಾಯುತ್ತಿರುತ್ತಾರೆ.

ಲಾಕ್‌ಡೌನ್‌ ಆಗಿರುವ ಕಾರಣ ಹೊರ ದೇಶಗಳಿಂದ ಉದ್ಯೋಗದ ನಿಮಿತ್ತ ತೆರಳಿದ್ದ ಜನರು ಕೆಲಸವಿಲ್ಲದೆ ಚಿಂತಿತರಾಗಿದ್ದಾರೆ. ಇವರ ಹಸಿವನ್ನು ನೀಗಿಸಲು ಸ್ಥಳೀಯ ಸರಕಾರ ಆಹಾರದ ವ್ಯವಸ್ಥೆಯನ್ನು ಮಾಡಿದೆ. 2018ರ ಅಂಕಿಅಂಶದ ಪ್ರಕಾರ ಸುಮಾರು 8.6 ಮಿಲಿಯನ್‌ (80.60 ಲಕ್ಷ) ಜನಸಂಖ್ಯೆಯಿರುವ ಸ್ವಿಜರ್‌ಲ್ಯಾಂಡ್‌ನ‌ಲ್ಲಿ 6.60 ದಶಲಕ್ಷ ಜನರು ಬಡವರಾಗಿದ್ದಾರೆ. ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ಒಂಟಿ ಪೋಷಕರು ಮತ್ತು ಕಡಿಮೆ ಶಿಕ್ಷಣ ಹೊಂದಿರುವವರು ಒಮ್ಮೆ ಉದ್ಯೋಗ ಕಳೆದುಕೊಂಡ ಬಳಿಕ ಮರಳಿ ಕೆಲಸ ಸಂಪಾದಿಸಿಕೊಳ್ಳುವುದು ಸುಲಭವಲ್ಲ. ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಅವರ ಸಂಕಷ್ಟ ದ್ವಿಗುಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿನ 1.1 ದಶ ಲಕ್ಷಕ್ಕಿಂತಲೂ ಹೆಚ್ಚಿನ ಜನರು ಬಡತನಕ್ಕೆ ತುತ್ತಾಗುವ ಭೀತಿ ಯಲ್ಲಿದ್ದಾರೆ. ಜಗತ್ತಿನಲ್ಲಿ ಜಿನೀವಾ ಎರಡನೇ ಅತ್ಯಂತ ದುಬಾರಿ ನಗರ ಎಂದು ಸ್ವಿಸ್‌ ಬ್ಯಾಂಕ್‌ ಯುಬಿಎಸ್‌ ಹೇಳಿತ್ತು. ಇಲ್ಲಿ ವಾಸಿಸುವ ಜನರ ಸರಾಸರಿ ಆದಾಯವು ಅಧಿಕವಾಗಿದ್ದರೂ ಅದು ಅಲ್ಲಿನ ಜೀವನ ಮಟ್ಟಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಇಂತಹ ನಗರದಲ್ಲಿ ಬಡವರು ಕೂಲಿ ಮಾಡಿಕೊಂಡು ಸಂಪಾದಿಸಿದ ಹಣದಲ್ಲಿ ಬದುಕುವುದು ಸುಲಭವಲ್ಲ. ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಜಿನೀವಾದಲ್ಲಿ ಜನ ಜೀವನ ಅಂದುಕೊಂಡಷ್ಟು ನಿರಾಯಾಸವಾಗಿಲ್ಲ. ವಿಶೇಷವಾಗಿ ಮನೆಕೆಲಸದವರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಹೋಟೆಲ್‌ ಕಾರ್ಮಿಕರು ಈಗ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿದ್ದು ಕೈಯಲ್ಲಿ ಹಣ ಇಲ್ಲವಾಗಿದೆ. ಇಂತಹ ಸಂಕಷ್ಟದ ಮಧ್ಯೆ ಜೀವಿಸಲು ಸ್ವಿಜ್‌ ಸರಕಾರ ಕೊಡುವ ಆಹಾರ ತುಂಬಾ ಮಹತ್ವದ್ದಾಗಿದೆ. ಇದನ್ನು ಪಡೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ದೇಶ ಶ್ರೀಮಂತವಾಗಿದ್ದರೂ ಅಲ್ಲಿನ ಬಡವರ ಪಾಡು ಎಲ್ಲ ಬಡವರಂತೆಯೇ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next