ಕೋವಿಡ್ 19 ಸೋಂಕು ತಡೆಗಟ್ಟಲು ಜಾರಿಗೆ ತರಲಾಗಿರುವ 21 ದಿನಗಳ ಲಾಕ್ ಡೌನ್, ವಲಸಿಗ ಕಾರ್ಮಿಕರು ಮತ್ತು ಬಡವರ ಪಾಲಿಗೆ ದೊಡ್ಡ ಸಂಕಷ್ಟವಾಗಿ ಬದಲಾಗಿದೆ. ಅದರಲ್ಲೂ ಮಹಾನಗರಗಳಿಗೆ ದುಡಿಮೆಗಾಗಿ ಹಳ್ಳಿ – ಪಟ್ಟಣಗಳಿಂದ ವಲಸೆ ಹೋಗಿದ್ದವರೆಲ್ಲ, ಈಗ ಸಾಗರೋಪಾದಿಯಲ್ಲಿ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಬಹುತೇಕ ರಾಜ್ಯಗಳು ಅಂತಾರಾಜ್ಯ ಸಂಚಾರವನ್ನು ನಿಲ್ಲಿಸಿರುವುದರಿಂದ ಈಗ ಈ ವರ್ಗ ಗುಂಪು ಗುಂಪಾಗಿ ನಡಿಗೆಯಲ್ಲೇ ನೂರಾರು ಕಿಲೋ ಮೀಟರ್ ಸಂಚರಿಸುತ್ತಿದೆ. ರಾಜ್ಯದ ಒಳಗೂ ಈ ರೀತಿಯ ಚಿತ್ರಣ ವರದಿಯಾಗುತ್ತಲೇ ಇದೆ.
ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನದಿಂದ ನಡೆದ
ಘಟನಾವಳಿಗಳು ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಅಡಚಣೆಯಾಗಿ
ಪರಿಣಮಿಸಿದೆ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ, ಇತರೆ
ರಾಜ್ಯಗಳ ವಲಸೆ ಕೆಲಸಗಾರರು ತಮ್ಮ ಊರುಗಳಿಗೆ ಕಿಕ್ಕಿರಿದ ಸಂಖ್ಯೆಯಲ್ಲಿ
ಹಿಂದಿರುಗಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿಯ ಸರ್ಕಾರಿ ಬಸ್‌ಸ್ಟಾಂಡುಗಳಲ್ಲಿ ಸಾವಿರಾರು ಜನರು ಸೋಂಕಿನ ಭಯವಿಲ್ಲದೇ ಕಿಕ್ಕಿರಿದು ತುಂಬಿದ್ದ ದೃಶ್ಯಗಳು ಭಯ ಹುಟ್ಟಿಸುವಂತಿದ್ದವು. ಊರು ಸೇರಿದರೆ ಸಾಕೆಂಬ ಚಿಂತೆಯಲ್ಲಿ ಬಸ್ಸುಗಳ ಒಳಗೆ ಹಾಗೂ ಟಾಪ್‌ನ ಮೇಲೆ ಹತ್ತಿ ಕೂತ ಇವರೆಲ್ಲರ ಮುಖದಲ್ಲಿ ಆತಂಕವೂ, ಅಸಹಾಯಕತೆಯೂ ತುಂಬಿ ತುಳುಕುತ್ತಿತ್ತು.
ಆದಾಗ್ಯೂ ಈಗ ದೆಹಲಿ ಮತ್ತು ಇತರೆ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆಯಾದರೂ, ಆಗಬೇಕಾದ ಅನಾಹುತ ಆಗಿಹೋಗಿರಲೂಬಹುದು. ಈಗ ಜನ ಕಾಲ್ನಡಿಗೆಯಲ್ಲೇ ಸುಡುವ ಬಿಸಿಲಲ್ಲಿ, ನೀರು, ಆಹಾರವಿಲ್ಲದೇ ಊರಿಗೆ ತೆರಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯಗಳ ಗಡಿಗಳನ್ನು ಮುಚ್ಚಬೇಕು ಮತ್ತು ವಲಸಿಗ ಕಾರ್ಮಿಕರಿಗೆ ಅವರು ಇರುವ ಜಾಗದಲ್ಲೇ ಆಹಾರ, ಹಣ ನೀಡುವ ವ್ಯವಸ್ಥೆಯನ್ನು ಖಾತ್ರಿ ಪಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಹೇಳಿದೆ. ಮೇಲ್ನೋಟಕ್ಕೆ, ಈ ಪ್ರಮಾಣದಲ್ಲಿ ಜನ ಸೋಂಕಿನ ಬಗ್ಗೆ ಚಿಂತಿಸದೇ ಗುಂಪುಗಟ್ಟಿ ಊರು ತೊರೆಯುತ್ತಿರುವುದು ಅಸಡ್ಡೆಯಂತೆ ಕಾಣಿಸಬಹುದು. ಆದರೆ ಇದರ ಹಿಂದೆ ಅತೀವ ಅಸಹಾಯಕತೆ ಅಡಗಿದೆ.
ಕೆಲಸವಿಲ್ಲದೇ, ಊಟವಿಲ್ಲದೇ, ಭವಿಷ್ಯದ ದಿಕ್ಕು ತೋಚದೆ ಈ ವರ್ಗ ಕಂಗಾಲಾಗಿದೆ. ಕಟ್ಟಡ ಕಾಮಗಾರಿಗಳಿಂದ ಹಿಡಿದು, ಈ ವರ್ಗಕ್ಕೆ ಆಸರೆಯಾಗಿದ್ದ ಕೆಲಸಗಳೆಲ್ಲ ನಿಂತುಹೋಗಿವೆ. ಇವರನ್ನು ಕೇಳುವವರೇ ಇಲ್ಲವಾಗಿದೆ. ಆದಾಗ್ಯೂ, ಇದನ್ನು ಗಮನದಲ್ಲಿಟ್ಟುಕೊಂಡೇ ಇತ್ತೀಚೆಗೆ ಕೇಂದ್ರ ಸರಕಾರ 1.7 ಲಕ್ಷ ಕೋಟಿ ರೂಪಾಯಿ ಬೃಹತ್ ಪ್ಯಾಕೇಜು ಘೋಷಿಸಿದೆಯಾದರೂ, ಈ ಸಹಾಯವು ಫಲಾನುಭವಿಗಳಿಗೆ ತಲುಪಲು ಸಮಯ ಹಿಡಿಯಬಹುದು. ಹಾಗೆಂದು, ಇದು ಕೇವಲ ಕೇಂದ್ರ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ… ರಾಜ್ಯ ಸರ್ಕಾರಗಳು ಹಾಗೂ ಉದ್ಯೋಗದಾತರೂ ಕೂಡ ಬಡ ವರ್ಗಕ್ಕೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡಲೇಬೇಕಿದೆ.
ಇದು ಮಾನವೀಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ದೃಷ್ಟಿಯಿಂದ ತುರ್ತಾಗಿ ಆಗಲೇಬೇಕಾದ ಕೆಲಸ. ಕೊರೊನಾ ಸೋಂಕು ನಗರಗಳಿಂದ ಗ್ರಾಮಗಳಿಗೆ ಹರಡಲಾರಂಭಿಸಿಬಿಟ್ಟರೆ, ದೇಶ ಮತ್ತೆ ಎದ್ದು ನಿಲ್ಲುವುದೇ ಕಷ್ಟವಾಗಿಬಿಡುತ್ತದೆ. ಹೀಗಾಗಿ, ಈ ವಿಚಾರದಲ್ಲಿ ಅಸಡ್ಡೆ ಮಾಡುವುದು ಯಾವ ರೀತಿಯಿಂದಲೂ ಸರಿಯಲ್ಲ. ಕೂಡಲೇ ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಾರ್ಯೋನ್ಮುಖಆಗಲಿ.