Advertisement

Covid: 10 ದಿನದಲ್ಲಿ 10 ಪಟ್ಟು ಸೋಂಕು ಹೆಚ್ಚಳ

12:00 AM Jan 03, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟ ಎಲ್ಲಾ 10 ಪ್ರಕರಣಗಳ ಬಗ್ಗೆ ಸರಕಾರ ಡೆತ್‌ ಆಡಿಟಿಂಗ್‌ ನಡೆಸಿದ್ದು, ಎಲ್ಲ ಸಾವಿಗೆ ಕೋವಿಡ್‌ ಕಾರಣವಲ್ಲ. ಮೃತರಲ್ಲಿ 9 ಮಂದಿ ಅನ್ಯ ಅಸ್ವಸ್ಥತೆಯನ್ನು ಹೊಂದಿದ್ದರು ಎಂಬ ಮಾಹಿತಿ ಹೊರಹಾಕಿದೆ.

Advertisement

ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜತೆ ಕೋವಿಡ್‌ -19 ನಿಯಂತ್ರಣ ಹಾಗೂ ಪೂರ್ವ ಸಿದ್ಧತೆ ಸಭೆ ನಡೆಸಿದ ಬಳಿಕ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಈ ಮಾಹಿತಿ ನೀಡಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ 9 ಮಂದಿಗೆ ಸಹ ಅಸ್ವಸ್ಥತೆ ಅಂದರೆ ಹೃದಯ, ಕಿಡ್ನಿ, ಡಯಾಬಿಟಿಸ್‌ ಸೇರಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಕೋವಿಡ್‌ ಕಾರಣಕ್ಕಾಗಿಯೇ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಆದರೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ಕೂಡ ಇರುವುದು ಗೊತ್ತಾಗಿದೆ. ಮಂಗಳೂರಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರು ಕೋವಿಡ್‌ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ಹೇಳಿದರು.

10 ದಿನದಲ್ಲಿ 10 ಪಟ್ಟು ವೇಗ
ಜೆಎನ್‌-1 ನಿಯಂತ್ರಣಕ್ಕಾಗಿಯೇ ಪ್ರತ್ಯೇಕ ಲಸಿಕೆ ಇನ್ನೂ ಅಭಿವೃದ್ಧಿಪಡಿಸಿಲ್ಲ. ಒಂದು ಮತ್ತು 2ನೇ ಕೋವಿಡ್‌ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದರೂ ಹೆಚ್ಚು ಮಾರಣಾಂತಿಕವಲ್ಲ. 10 ದಿನದಲ್ಲಿ 10 ಪಟ್ಟು ವೇಗವಾಗಿ ಸೋಂಕು ಹರಡಿರುವುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ವಿವರಿಸಿದರು.

ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೋವಿಡ್‌ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ. ಪ್ರತೀ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ 50 ಬೆಡ್‌ ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ 18,141 ಸರಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಲಭ್ಯ ಇವೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಕ್ತರ್‌, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ| ಸುಜಾತಾ ರಾಥೋಡ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ| ರವಿ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಕೋವಿಡ್‌ ಲಸಿಕೆ ಪಡೆಯಬಹುದು
60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘ‌ ಕಾಲದಿಂದ ಕಡಿಮೆಯಾಗದ ಅಸ್ವಸ್ಥತೆ ಹೊಂದಿರುವವರು ಮಾತ್ರ ಮತ್ತೂಮ್ಮೆ ಕೋವಿಡ್‌ ವ್ಯಾಕ್ಸಿನ್‌ ತೆಗೆದುಕೊಳ್ಳಬಹುದು. ಜನದಟ್ಟಣೆ ಪ್ರದೇಶದಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಸೂಕ್ತ. ಆದರೆ ಎಲ್ಲರೂ ಮಾಸ್ಕ್ ಧರಿಸುವುದನ್ನು ಸರಕಾರ ಕಡ್ಡಾಯ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರು, ಬೂಸ್ಟರ್‌ ಡೋಸ್‌ ಪಡೆಯದೇ ಇದ್ದವರು ಈಗ ಲಸಿಕೆ ಪಡೆಯ ಬಹುದು. ಓಮಿಕ್ರಾನ್‌ನ ರೂಪಾಂತರಿ ತಳಿಯಾದ ಜೆಎನ್‌-1 ಸೋಂಕು ಕಾಣಿಸಿಕೊಂಡಿದ್ದರೂ, ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ತಜ್ಞರೇ ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next