Advertisement
ಅನೇಕ ಕಂಪೆನಿಯವರು, ಸಂಸ್ಥೆಯವರು, ತಮ್ಮದೇ ಆದ ಕ್ಯಾಲೆಂಡರನ್ನು ಛಾಪಿಸುತ್ತಾರೆ. ಅವನ್ನು ಪುಕ್ಕಟೆಯಾಗಿ ತಮ್ಮ ಗಿರಾಕಿಗಳಿಗೆ ಹಂಚುತ್ತಾರೆ. ಇಂಥ ಕ್ಯಾಲೆಂಡರ್‌ಗಳು ಸಾಕಷ್ಟು ದೊಡ್ಡದಾಗಿ ಇರುವುದೂ ಉಂಟು. ಆಕರ್ಷಕವಾಗಿ ಕಾಣಲಿ ಎಂಬ ಉದ್ದೇಶದಿಂದ ಪ್ರತೀ ಪುಟದ ಮೇಲೆ ತರಹೇವಾರಿ ಚಿತ್ರಗಳನ್ನು ಹಾಕುವುದೂ ಉಂಟು. ಇಡಿಯ ವರ್ಷ ಅದು ತಮ್ಮ ಗೋಡೆಗಳ ಮೇಲೆ ವಿರಾಜಿಸುತ್ತಿರುವುದರಿಂದ ಅವರಿಗೆ ಯಾವುದೇ ಖರ್ಚಿಲ್ಲದೆ ತಮ್ಮ ಸಂಸ್ಥೆಯ ಜಾಹೀರಾತಿನ ಫಲ ದೊರೆಯುತ್ತದೆ. ಕೆಲವರು ತಮ್ಮ ಭಾವಚಿತ್ರಗಳನ್ನೇ ದೊಡ್ಡದಾಗಿ ಛಾಪಿಸಿ, ಒಂದೇ ಹಾಳೆಯ ಮೇಲೆ ಸಣ್ಣದಾಗಿ ಇಡೀ ವರ್ಷದ ತಾರೀಕು ಪಟ್ಟಿಯನ್ನು ಕೆಳಗೆ ಮುದ್ರಿಸಿ ವಿತರಿಸುವುದಿದೆ. ಅವರಿಗೆ ಸಾರ್ವಜನಿಕವಾಗಿ ತಮ್ಮನ್ನು ತಾವು ಪ್ರೊಜೆಕ್ಟ್ ಮಾಡುವ ಉತ್ಸಾಹ.
Related Articles
Advertisement
ನಮ್ಮ ಜೀವನದಲ್ಲಿ ಇಷ್ಟು ಮಹತ್ವ ಪಡೆದ ಈ ಕ್ಯಾಲೆಂಡರ್‌ಗಳ ಹುಟ್ಟು ಹೇಗಾಯಿತು? ಅದಕ್ಕೆ ಅದರ ಮೂಲಕ್ಕೆ ಹೋಗಬೇಕು. ಸುಮಾರು ಹತ್ತುಸಾವಿರ ವರ್ಷಗಳ ಹಿಂದೆಯೇ ಕ್ಯಾಲೆಂಡರ್ ಇತ್ತೆಂದು ಸ್ಕಾಟ್‌ಲ್ಯಾಂಡಿನಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕಂಚಿನ ಫಲಕವೊಂದರಿಂದ ತಿಳಿಯುತ್ತದೆ. ಅದರಲ್ಲಿ ಹನ್ನೆರಡು ಗುಳಿಗಳಿದ್ದು ಮೇಲೆ ವೃತ್ತಾಕಾರವಾದ ಒಂದು ಚಿತ್ರವಿದೆ. ಗುಳಿಗಳು ತಿಂಗಳನ್ನೂ , ವೃತ್ತ ಸೂರ್ಯಚಂದ್ರರನ್ನೂ ಸಂಕೇತಿಸುತ್ತದೆ ಎನ್ನುತ್ತಾರೆ. ಬಹುಶಃ ಇದೇ ಮೊತ್ತಮೊದಲ ದಾಖಲೆಯೆಂದು ಖಗೋಳಶಾಸ್ತ್ರಜ್ಞರು ಭಾವಿಸುತ್ತಾರೆ.
ಮೆಸಪೊಟೇಮಿಯಾ, ಬ್ಯಾಬಿಲೋನಿಯಾ ದೇಶಗಳಲ್ಲಿ ವ್ಯಾಪಾರ ಉತ್ಕರ್ಷ ಸ್ಥಿತಿಯಲ್ಲಿ ಇದ್ದಾಗ ತಾವು ಕೊಟ್ಟ ಸಾಲದ ಲೆಕ್ಕ ಇಡಲು ಅವರು ದಿನವನ್ನು ನಿರ್ಧರಿಸುವ ಅಗತ್ಯ ಬಿದ್ದಿತ್ತು. ಆಗ ಅಲ್ಲಿ ದಿನ, ವಾರ, ತಿಂಗಳು, ವರ್ಷಗಳಿಗಾಗಿ ಹಲವು ತರದ ತಾರೀಕು ಪಟ್ಟಿಯನ್ನು ಬಳಸುತ್ತಿದ್ದರಂತೆ. ಕ್ರಮೇಣ ಸುಮೇರಿಯನ್ ದ್ವೀಪ, ಈಜಿಪ್ಟ್, ಅಸ್ಸೀರಿಯಾದಿಂದ ಹಿಡಿದು ಪರ್ಶಿಯಾ, ಬಾಲಿ, ಇಂಡೋನೇಶ್ಯಾ ಇತ್ಯಾದಿ ದೇಶದ ಜನರು ಕ್ಯಾಲೆಂಡರ್‌ನ ಅಗತ್ಯವನ್ನು ಕಂಡುಕೊಂಡರು. ಚೀನಾ, ಜಪಾನ್ ಮುಂತಾದ ದೇಶಗಳು ಈಗಲೂ ತಮ್ಮ ಪಾರಂಪರಿಕ ಪಂಚಾಂಗಗಳದ್ದೇ ಕ್ಯಾಲೆಂಡರ್ ಬಳಸುತ್ತಾರೆ.
ಈ ಎಲ್ಲ ಕ್ಯಾಲೆಂಡರ್‌ಗಳ ಬುನಾದಿ ಇದ್ದದ್ದು ಹಗಲು ಮತ್ತು ರಾತ್ರಿಗಳ ಮೇಲೆ. ಅದನ್ನು ಸೂರ್ಯಮಾನ, ಚಾಂದ್ರಮಾನ ಎಂದು ಬಳಸುತ್ತಿದ್ದರು. ಅವುಗಳ ನಿಖರ ಲೆಕ್ಕಾಚಾರಕ್ಕಾಗಿ ಖಗೋಳಶಾಸ್ತ್ರಜ್ಞರ ಸಹಾಯ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ತಮ್ಮ ಅವಿರತ ಸಂಶೋಧನೆಗಳಿಂದ, ಶ್ರಮದಿಂದ ಈ ಖಗೋಳಶಾಸ್ತ್ರಜ್ಞರು ವರ್ಷಕ್ಕೆ 365 ದಿನಗಳಿರುತ್ತಾವೆಂದು ಕಂಡುಹಿಡಿದರು. ಅದನ್ನು ಮಳೆಬೆಳೆಯ ಆಧಾರದ ಮೇಲೆ ಮಳೆಗಾಲ, ಚಳಿಗಾಲ, ವಸಂತಕಾಲ, ಬೇಸಿಗೆ ಕಾಲ ಎಂದು ವಿಭಜಿಸಿದರು. ಅವರು ಕಂಡುಹಿಡಿದಂತೆ ಚಂದ್ರನ ಒಂದು ಪರಿಗ್ರಹಣ ಒಂದು ತಿಂಗಳೆಂದೂ ಅಮಾವಾಸ್ಯೆಯ ಮರುದಿನ ಹೊಸಚಂದ್ರನ ಉದಯವಾಗುವುದರಿಂದ ಮತ್ತೂಂದು ತಿಂಗಳೆಂದೂ ಲೆಕ್ಕಹಾಕಿದರು. ಕೆಲವು ದೇಶದವರು ಆಗ ಒಂದು ತಿಂಗಳಿಗೆ ಮೂವತ್ತು ದಿನಗಳಿದ್ದು ಅದನ್ನು ಹತ್ತು ದಿನಗಳ ಒಂದು ವಾರವೆಂದು ಮೂರು ವಾರಗಳು ಮಾತ್ರವೇ ನಿಗದಿಮಾಡಿದ್ದರಂತೆ. ಅಂದರೆ ಒಂದು ವರ್ಷಕ್ಕೆ ಮೂವತ್ತಾರು ವಾರಗಳಿದ್ದು 360 ದಿನಗಳು ಮಾತ್ರ ಆದುವು. ವರ್ಷಕ್ಕೆ ಮಿಗುವ ಐದು ಚಿಲ್ಲರೆ ದಿನಗಳನ್ನು ಕೈಬಿಟ್ಟದ್ದೂ ಇದೆ. ಅನೇಕ ದೇಶದವರು ತಮ್ಮ ಕ್ಯಾಲೆಂಡರಿನಲ್ಲಿ ಬಳಸಿದ ದಿನಗಳು ಹೆಚ್ಚುಕಮ್ಮಿಯಾದದ್ದೂ ಇದೆ. ಕೆಲವು ದೇಶಗಳಲ್ಲಿ ಎಂಟರಿಂದ ಹದಿನೈದು ದಿನಗಳು ಕಮ್ಮಿಯಾಗಿದ್ದುವು. ಅಂದರೆ ಒಂದನೆಯ ತಾರೀಕಿಗೆ ರಾತ್ರಿ ಮಲಗಿದ್ದ ವ್ಯಕ್ತಿ ಹದಿನಾಲ್ಕನೆಯ ತಾರೀಕಿನಂದು ಏಳುತ್ತಾನೆ! ಕೆಲವು ದೇಶದವರು ಜನವರಿಯಿಂದ ಆರಂಭ ಮಾಡದೇ ಮುಂದೆಂದೋ ಹೊಸವರ್ಷವನ್ನು ಆರಂಭಿಸಿದ್ದಿದೆ. ಹೆಚ್ಚಾಗಿ ರೋಮನ್ ಕ್ಯಾಥೊಲಿಕ್ ದೇಶದವರು ಈಸ್ಟರ್ ಔತಣಕೂಟದಿಂದ ಹೊಸವರ್ಷವನ್ನು ಆರಂಭಿಸಿದ್ದಿದೆ. ಇವೆಲ್ಲ ಅನೇಕ ಸಮಸ್ಯೆಗಳಿಗೆ ಕಾರಣವಾದುವು. ಖಗೋಳಶಾಸ್ತ್ರ ಅಭಿವೃದ್ಧಿಗೊಂಡಂತೆ ಒಂದು ವರ್ಷಕ್ಕೆ 360 ಅಲ್ಲ, 365 ದಿನಗಳು ಇದ್ದಾವೆಂದು ದೃಢೀಕರಿಸಿದಾಗ ಒಪ್ಪಿಕೊಂಡ ನಿಯಮಗಳನ್ನು ಖಂಡಿಸಿದ್ದಕ್ಕೆ ಕೆಲವು ಖಗೋಳಶಾಸ್ತ್ರಜ್ಞರು ಗಲ್ಲಿಗೇರಿಸಿದ್ದೂ ಇದೆ. ಆದರೆ, ಅವರ ವಾದವನ್ನೇ ಪುರಸ್ಕರಿಸಬೇಕಾಗಿ ಬಂದಾಗ, ಕ್ಯಾಲೆಂಡರ್‌ನ ಸ್ವರೂಪದಲ್ಲಿ ಬದಲಾವಣೆಯಾಯಿತು. ಸೂರ್ಯ ಭೂಮಿಗೆ ಒಂದು ಸಂಪೂರ್ಣ ಸುತ್ತು ಬರಲು 365 ದಿನ ಕೂಡಾ ಅಲ್ಲ, ಮತ್ತೂ ಕಾಲು ದಿನ ಬೇಕಾಗುತ್ತವೆ ಎಂದು ಕಂಡುಕೊಂಡಾಗ ನಾಲ್ಕು ವರ್ಷಗಳಿಗೊಮ್ಮೆ ಒಂದು ದಿನ ಸೇರಿಸಿ ಅಧಿಕವರ್ಷವೆಂದು ನಿಯಮಿಸಿದರು. ಕಾಲು ದಿನ ಎಂದು ಸರಳವಾಗಿ ಹೇಳಿದೆ. ಒಂದು ವರ್ಷದ ನಿಖರವಾದ ದಿನಗಳೆಷ್ಟು ಗೊತ್ತೇ? 365.24219858156 ದಿನಗಳು.
ಖಗೋಳಶಾಸ್ತ್ರಜ್ಞರಿಗೆ ತಾವು ಮಂಡಿಸುವ ವಾದಗಳಿಗೆ ಪ್ರಭುತ್ವದ ಮೊಹರಿನ ಅಗತ್ಯವಿತ್ತು. ರೋಮಿನಲ್ಲಿ ಜೂಲಿಯಸ್ ಸೀಜರಿನ ಆಡಳಿತವಿರುವಾಗ ಕ್ರಿಸ್ತಪೂರ್ವ 48ರಲ್ಲಿ ಅದೂ ಒದಗಿತು. ಆಗ ಬಂದ ಜೂಲಿಯನ್ ಕ್ಯಾಲೆಂಡರ್ ಮುಂದೆ ಬಹಳ ವಿಕಾಸಗೊಂಡಿತು. ಸುಮಾರು ಐನೂರು ವರ್ಷಗಳ ತನಕ ಜೂಲಿಯನ್ ಕ್ಯಾಲೆಂಡರನ್ನೇ ಅಧಿಕೃತವಾಗಿ ಎಲ್ಲ ಕಡೆಯೂ ಸ್ವೀಕರಿಸಲಾಗಿತ್ತು.
ಯಾವಾಗ ಗೆಲಿಲಿಯೋ ಎಂಬ ಖಗೋಳಶಾಸ್ತ್ರಜ್ಞ, ಸೂರ್ಯ ಭೂಮಿಯ ಸುತ್ತ ತಿರುಗುವುದಲ್ಲ, ಭೂಮಿಯೇ ಸೂರ್ಯನ ಸುತ್ತ ತಿರುಗುತ್ತಿದೆ ಎಂದು ಸಾಧಿಸಿದನೋ, ಅವನನ್ನು ರೋಮನ್ ಚರ್ಚ್ ಕ್ಷಮೆ ಕೇಳಲು ಆಗ್ರಹಿಸಿ, ಕೊನೆಗೆ ವಧೆ ಮಾಡಿತು. ಆದರೂ ಅವನ ವಾದವನ್ನು ಅಂಗೀಕರಿಸಬೇಕಾದ ಅನಿವಾರ್ಯತೆಗೆ ಬಿತ್ತು. 1,582ರಲ್ಲಿ ಹದಿಮೂರನೆಯ ಪೋಪ್, ಗ್ರೆಗರಿ ಎಂಬವರು ಹೊಸ ಕ್ಯಾಲೆಂಡರ್ ಒಂದನ್ನು ಸಿದ್ಧಪಡಿಸಿದರು. ಅದು ಗ್ರೆಗೇರಿಯನ್ ಕ್ಯಾಲೆಂಡರ್ ಎಂದು ಜನಪ್ರಿಯವಾಗಿ ಈಗ ಅದನ್ನೇ ಹೆಚ್ಚಿನ ದೇಶದವರು ಬಳಸುತ್ತಿದ್ದಾರೆ. ಈಗ ನಮ್ಮಲ್ಲಿ ಇರುವುದೂ ಅದೇ ಕ್ಯಾಲೆಂಡರ್. ದಿನಾಂಕ, ವಾರ, ತಿಂಗಳು, ವರ್ಷ ಇವುಗಳು ನೇಮಿತವಾಗಿರುವುದಲ್ಲದೇ ನಾಲ್ಕು ವರ್ಷಗಳಿಗೊಮ್ಮೆ ಅಧಿಕವರ್ಷ ಬರುವುದೂ ಅಲ್ಲಿ ಉಲ್ಲೇಖೀತವಾಗಿದೆ.
ಪ್ರತಿಯೊಂದು ದೇಶದ ಸರಕಾರ ಏನನ್ನಾದರೂ ಅನುಷ್ಠಾನಕ್ಕೆ ತರಬೇಕಾದರೆ ಅದನ್ನು ಅವರವರ ಸಂಸತ್‌ನಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಬೇಕು. ಫ್ರಾನ್ಸ್, ಜರ್ಮನಿ, ಇಟಲಿ, ಎಲ್ಲ ಬಹಳ ಮೊದಲೇ ಗ್ರೆಗೇರಿಯನ್ ಕ್ಯಾಲೆಂಡರ್‌ನ್ನು ಅಂಗೀಕರಿಸಿದರೂ ಇಂಗ್ಲೆಂಡ್ ಅದನ್ನು ಅಂಗೀಕರಿಸಿದ್ದು 1,752ರಲ್ಲಿ. ಯುರೋಪಿನ ಹೆಚ್ಚಿನ ದೇಶದವರು ಅಂಗೀಕರಿಸಿದ ಕಾರಣ ಇಂಗ್ಲೆಂಡ್ ಕೂಡ ಅದನ್ನು ಬಳಸಬೇಕಾಯಿತಾದರೂ ಅವರು ಅದನ್ನು ಗ್ರೆಗೇರಿಯನ್ ಕ್ಯಾಲೆಂಡರ್ ಎಂದು ಕರೆಯಲಿಲ್ಲ.
ಇಂಗ್ಲೆಂಡ್ ಈ ಗ್ರೆಗೇರಿಯನ್ ಕ್ಯಾಲೆಂಡರ್‌ನ್ನು ಅಂಗೀಕರಿಸಿದ ಮೇಲೆ ತನ್ನ ವಸಾಹತುಗಳಲ್ಲೂ ಅದನ್ನು ರೂಢಿಸಲು ಅಪ್ಪಣೆ ಮಾಡಿತು. ಅದರಿಂದಾಗಿ ಅವರ ಆಧೀನದಲ್ಲಿದ್ದ ಅಮೆರಿಕೆಯ ಭಾಗ ಅದನ್ನೇ ಬಳಸಿತು. ಆದರೆ, ರಷ್ಯಾದ ಅಧೀನದಲ್ಲಿದ್ದ ಅಮೆರಿಕದ ಪ್ರದೇಶಗಳು ಆ ಕ್ಯಾಲೆಂಡರ್‌ನ್ನು ಸ್ವೀಕರಿಸಬೇಕಾದರೆ 115 ವರ್ಷಗಳೇ ಕಾಯಬೇಕಾಯಿತು. ಬ್ರಿಟಿಷರ ವಸಾಹತಾಗಿದ್ದ ಇಂಡಿಯಾ ಕೂಡಾ 1,752ರಲ್ಲಿಯೇ ಗ್ರೆಗೇರಿಯನ್ ಕ್ಯಾಲೆಂಡರನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು.
ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ನಮಗೆ ನಮ್ಮದೇ ಕ್ಯಾಲೆಂಡರ್ ಬೇಕಾಗಿತ್ತಲ್ಲವೆ? ಅದಕ್ಕಾಗಿ ಗ್ರೆಗೇರಿಯನ್ ಕ್ಯಾಲೆಂಡರ್‌ನ್ನು ಅಧಿಕೃತವಾಗಿ ಸ್ವೀಕರಿಸಲು ನಮ್ಮ ಸಂಸತ್ತಿನಲ್ಲಿ ಮಸೂದೆಯೊಂದರ ಮಂಡನೆ ಮಾಡಿದರು. ಆದರೆ, ನಮ್ಮ ಪಂಚಾಂಗಗಳು ಇರುವಾಗ ಈ ಕ್ಯಾಲೆಂಡರ್ ಯಾಕೆ, ನಮ್ಮದೇ ಮಾಡಬಹುದಲ್ಲ ಎಂಬ ಚರ್ಚೆ ನಡೆಯಿತು. 1,957ರಲ್ಲಿ ಗ್ರೆಗೇರಿಯನ್ ಕ್ಯಾಲೆಂಡರಿನ ಇಂಗ್ಲಿಷ್ ತಾರೀಕುಗಳ ಕೆಳಗೆ ಸಣ್ಣ ಅಕ್ಷರಗಳಲ್ಲಿ ಚೈತ್ರ , ವೈಶಾಖ ಎಂದು ಮುಂತಾಗಿ ತಿಂಗಳುಗಳನ್ನೂ ಬರೆಯಬೇಕೆಂದೂ, ನಕ್ಷತ್ರಗಳನ್ನೂ ಅವುಗಳ ಪಾದಗಳನ್ನೂ ಬರೆಯಬೇಕೆಂದೂ ಪರಿಷ್ಕರಿಸಿ ಮಸೂದೆಯನ್ನು ಅಂಗೀಕರಿಸಲಾಯಿತು. ಖಗೋಳಶಾಸ್ತ್ರಜ್ಞ ಮೇಘನಾದ ಸಹಾ ಅವರ ನೇತೃತ್ವದಲ್ಲಿ ಆರು ಮಂದಿ ವಿದ್ವಾಂಸರ ತಂಡವೊಂದನ್ನು ನಿರ್ಮಿಸಿ, ವೈಜ್ಞಾನಿಕವಾಗಿ ಭಾರತದ ಅಧಿಕೃತ ಕ್ಯಾಲೆಂಡರ್ ರಚನೆಯಾಯಿತು. ಹೀಗೆ ಬಂತು ನಮ್ಮ ಇಂದಿನ ಸುಧಾರಿತ ಕ್ಯಾಲೆಂಡರ್.
ಗೋಪಾಲಕೃಷ್ಣ ಪೈ