Advertisement

ಭಾರತದ ಕೊವ್ಯಾಕ್ಸಿನ್‌ ಲಸಿಕೆ ಸುರಕ್ಷಿತ : ಲ್ಯಾನ್ಸೆಟ್‌ ವರದಿ

09:33 PM Mar 09, 2021 | Team Udayavani |

ನವದೆಹಲಿ: ಭಾರತದ ಮೊದಲ ದೇಶೀಯ ಕೊರೊನಾ ಲಸಿಕೆಯಾದ ಕೊವ್ಯಾಕ್ಸಿನ್‌ ಸುರಕ್ಷಿತವಾಗಿದ್ದು, ಯಾವುದೇ ಗಂಭೀರ ಅಡ್ಡ ಪರಿಣಾಮವಿಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಲ್ಯಾನ್ಸೆಟ್‌ ಸೋಂಕು ರೋಗಗಳ ನಿಯತಕಾಲಿಕೆಯಲ್ಲಿ ಪ್ರಕಟವಾದ 2ನೇ ಹಂತದ ಪ್ರಯೋಗದ ಮಧ್ಯಂತರ ಫ‌ಲಿತಾಂಶದ ವರದಿ ತಿಳಿಸಿದೆ.

Advertisement

ಲಸಿಕೆಯ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ ಫ‌ಲಾನುಭವಿಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ವರದಿ ಹೇಳಿದೆ. ಇತ್ತೀಚೆಗಷ್ಟೇ ಭಾರತ್‌ ಬಯೋಟೆಕ್‌ ಸಂಸ್ಥೆಯು ಕೊವ್ಯಾಕ್ಸಿನ್‌ ಶೇ.81ರಷ್ಟು ಪರಿಣಾಮಕಾರಿ ಎಂದು ಘೋಷಿಸಿತ್ತು.

ಇದೇ ವೇಳೆ, ದೇಶಾದ್ಯಂತ 24 ಗಂಟೆಗಳಲ್ಲಿ 15,388 ಮಂದಿಗೆ ಸೋಂಕು ದೃಢ ಪಟ್ಟು, 77 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನೆರಡು ದಿನದಲ್ಲಿ ನಿರ್ಧಾರ:
ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ರಾಜ್ಯಾದ್ಯಂತ ಅಥವಾ ಸೀಮಿತ ನಿರ್ಬಂಧಗಳನ್ನು ಹೇರಬೇಕೇ ಬೇಡವೇ ಎಂಬುದರ ಬಗ್ಗೆ ಇನ್ನು 2-3 ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನ-ಕೇಂದ್ರ ಚಕಮಕಿ!
ಕೊರೊನಾ ಅಭಿಯಾನದಡಿ ರಾಜಸ್ಥಾನಕ್ಕೆ ರವಾನೆಯಾಗಿರುವ ಲಸಿಕೆ ದಾಸ್ತಾನು 3 ದಿನಗಳಲ್ಲಿ ಮುಕ್ತಾಯವಾಗಲಿದ್ದು, ಶೀಘ್ರವೇ 60 ಲಕ್ಷ ಲಸಿಕೆಗಳನ್ನು ಕಳುಹಿಸುವಂತೆ ಅಲ್ಲಿನ ಸರ್ಕಾರ, ಕೇಂದ್ರವನ್ನು ಕೋರಿದೆ. ಆದರೆ, ಈ ಮನವಿಯನ್ನು ಕೇಂದ್ರ ನಿರಾಕರಿಸಿದ್ದು, ರಾಜಸ್ಥಾನಕ್ಕೆ 37.61 ಲಕ್ಷ ಲಸಿಕೆಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ ಸೋಮವಾರ ರಾತ್ರಿಯವರಿಗೆ 24.28 ಲಕ್ಷ ಲಸಿಕೆಗಳನ್ನು ಮಾತ್ರ ಬಳಸಿದೆ ಎಂದು ಹೇಳಿದೆ.

Advertisement

ಇದನ್ನೂ ಓದಿ :Instagram ನಲ್ಲಿ ‘ಮಾಹಿತಿ ಸೋರಿಕೆ’ ತಡೆಗಟ್ಟಲು ಯಾವೆಲ್ಲಾ ತಂತ್ರ ಅನುಸರಿಸಬಹುದು !

ದೆಹಲಿ ಹೈಕೋರ್ಟ್‌
ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ಸರಿಯಾಗಿ ಮಾಸ್ಕ್ ಧರಿಸದೇ ಇದ್ದಿದ್ದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಿ. ಹರಿಶಂಕರ್‌, ವಿಮಾನಗಳಲ್ಲಿ ಕೊರೊನಾ ಸೋಂಕು ತಡೆ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಂತೆ ನ್ಯಾಯಾಲಯದಿಂದ ಆದೇಶ ಹೊರಡಿಸಿದ್ದಾರೆ.

ಡಿಜಿಸಿಎ ಆದೇಶ
ಕೊರೊನಾ ಲಸಿಕೆ ಪಡೆದ ಭಾರತೀಯ ಪೈಲಟ್‌ಗಳು, ವಿಮಾನದ ಇತರ ಸಿಬ್ಬಂದಿ, ಲಸಿಕೆ ಪಡೆದ 48 ಗಂಟೆಗಳವರೆಗೆ ವಿಮಾನ ಸೇವೆಗೆ ತೊಡಗಿಸಿಕೊಳ್ಳುವಂತಿಲ್ಲ ಎಂದು ನಾಗರಿಕ ವಿಮಾನ ಮಹಾ ನಿರ್ದೇಶಕರ (ಡಿಜಿಸಿಎ) ಕಚೇರಿ ಆದೇಶ ಹೊರಡಿಸಿದೆ.

ವಿಶ್ವಸಂಸ್ಥೆ ಮೆಚ್ಚುಗೆ
ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಲಸಿಕೆ ಅಭಿಯಾನ ವಿಚಾರದಲ್ಲಂತೂ ಉಳಿದೆಲ್ಲಾ ದೇಶಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ವಿಶ್ವದಲ್ಲಿ ಲಸಿಕೆಯ ತವರು ಯಾವುದೆಂದು ಪ್ರಶ್ನಿಸಿದರೆ ಅದು ಭಾರತ ಎಂದು ನಿಸ್ಸಂಶಯವಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next