Advertisement

ಕೊರೊನಾ ಲಸಿಕೆ ಪಡೆದ ಜಿಲ್ಲಾಧಿಕಾರಿ ಜೋತ್ಸ್ನಾ

04:23 PM Feb 09, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂದಿ ಸೋಮವಾರದಿಂದ ಮೂರು ದಿನಗಳ ಕಾಲ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಮೊದಲಿಗರಾಗಿ ಖುದ್ದು ಲಸಿಕೆ ಪಡೆಯುವ ಮೂಲಕ ಲಸಿಕಾ ಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ನಗರದ ಜಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ ಮಾತನಾಡಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಕಳೆದ ಜ.16ರಿಂದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲಾಗಿದೆ. ಅದೇ ರೀತಿ ನಿತ್ಯದ ಜೀವನದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿ ಬರುವ ಹೆಚ್ಚಿನ ರಿಸ್ಕ್ ಹೊಂದಿರುವ ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂದಿಗೆ ಫೆ.10ರ ವರೆಗೆ ಮೂರು ದಿನಗಳ ಕಾಲ ಲಸಿಕೆ ನೀಡಲಾಗುತ್ತಿದೆ ಎಂದರು.

ದೇಶದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ-ಸಿಬ್ಬಂದಿ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು. ಈಗ ನಾನು ಲಸಿಕೆ ಹಾಕಿಕೊಂಡಿದ್ದು, ಏನು ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಈ ಲಸಿಕೆ ನೀಡಲಾಗುತ್ತಿದ್ದು, ಆತಂಕಕ್ಕೊಳಗಾಗಬೇಕಿಲ್ಲ ಎಂದರು. ನಂತರ ಅರ್ಧ ಗಂಟೆ ವೈದ್ಯರ ವೀಕ್ಷಣೆಯಲ್ಲಿದ್ದರು.

ಜಿಲ್ಲಾದ್ಯಂತ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಮ್ಸ್‌ ಆಸ್ಪತ್ರೆ ಹಾಗೂ ಇಎಸ್‌ ಐಸಿ ಆಸ್ಪತ್ರೆ ಒಳಗೊಂಡಂತೆ 23 ಲಸಿಕೆ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ 21 ಸೆಷನ್ಸ್‌ಗಳಲ್ಲಿ 8,510 ಸಿಬ್ಬಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸದ್ಯದ ಅಂದಾಜಿನ ಪ್ರಕಾರ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ 3,194, ಪೊಲೀಸ್‌ ಇಲಾಖೆಯ 3,772 ಹಾಗೂ ನಗರ ಸ್ಥಳೀಯ ಸಂಸ್ಥೆಗಳ 1,544 ಅಧಿಕಾರಿ-ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಮ್ಸ್‌ ಪ್ರಭಾರಿ ಡೀನ್‌ ಡಾ.ಚಂದ್ರಶೇಖರ್‌ ಕರ್ಪೂರ್‌, ವೈದ್ಯಕೀಯ ಅ ಧೀಕ್ಷಕ ಡಾ.ಶಫಿಯೋದ್ದಿನ್‌, ಪಿಎಸ್‌ಎಂ ಮುಖ್ಯಸ್ಥ ಡಾ.ಅಜಯಕುಮಾರ, ಡಾ.ಜಯಮ್ಮ, ನೋಡಲ್‌ ಅಧಿ ಕಾರಿ ಡಾ.ಗುರುರಾಜ, ಜಿಲ್ಲಾ ಆಸ್ಪತ್ರೆಯ ಶಸ್ತಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ಎಸ್‌.ರುದ್ರವಾಡಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್‌ ಸೇರಿದಂತೆ ನರ್ಸಿಂಗ್ ಸಿಬ್ಬಂದಿ ಇದ್ದರು.

Advertisement

ಸಾಮಾನ್ಯವಾಗಿ ಮಕ್ಕಳಿಗೆ ನೀಡಲಾಗುವ ಲಸಿಕೆಯಂತೆ ಕೊರೊನಾ ಲಸಿಕೆ ಇದೆ. ನಿಗಾವಣೆ ನಿಟ್ಟಿನಲ್ಲಿ ಎಲ್ಲ ಲಸಿಕಾ ಕೇಂದ್ರದಲ್ಲಿ ಪ್ರತ್ಯೇತ ಆರೋಗ್ಯ ತಂಡ ಇರಲಿವೆ. ಲಸಿಕೆ ಪಡೆದ ನಂತರ ಸಣ್ಣ-ಪುಟ್ಟ ಜ್ವರ ಬಂದರೂ ಭಯಪಡಬೇಕಿಲ್ಲ.
ವಿ.ವಿ.ಜೋತ್ಸ್ನಾ, ಜಿಲ್ಲಾಧಿಕಾರಿ

3,002 ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹೊಂದುವ ಗುರಿ ಹೊಂದಲಾಗಿತ್ತು. ಇದರಲ್ಲಿ 442 ಜನರಿಗೆ ಲಸಿಕೆ ನೀಡಲಾಗಿದೆ. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ 128, ಪೊಲೀಸ್‌ ಇಲಾಖೆಯ 288 ಮತ್ತು ನಗರಾಭಿವೃದ್ಧಿ ಇಲಾಖೆಯ 26 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ.
ಡಾ.ರಾಜಶೇಖರ ಮಾಲಿ,
ಡಿಎಚ್‌ಒ.

Advertisement

Udayavani is now on Telegram. Click here to join our channel and stay updated with the latest news.

Next