ಮೈಸೂರು: ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ 42 ದಿನಗಳಲ್ಲೇ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಅಪರಾಧಿಗೆ 20 ವರ್ಷ ಸಜೆ ವಿಧಿಸಿರುವ ನ್ಯಾಯಾಲಯ, ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ತ್ವರಿತಗತಿಯಲ್ಲಿ ತೀರ್ಪು ನೀಡಿದ ಅಪರೂಪದ ಪ್ರಕರಣ ಇದಾಗಿದ್ದು, ಕಳೆದ ತಿಂಗಳು 6ರಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ 19ರಂದು ಘಟನೆ ನಡೆದಿತ್ತು. 3ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿ ಅಜ್ಜಿ ಮನೆ ಮುಂದೆ ಆಟವಾಡುತ್ತಿದ್ದಾಗ ಆಕೆಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಅನಂತರ ಆಕೆಯ ಬಟ್ಟೆಯನ್ನು ಸುಟ್ಟು ಸಾಕ್ಷ್ಯ ನಾಶಗೊಳಿಸಿದ ಬಗ್ಗೆ ದೂರು ದಾಖಲಾಗಿತ್ತು. ಹುಲ್ಲಹಳ್ಳಿ ಪೊಲೀಸರು ತನಿಖೆ ನಡೆಸಿ ಮಾ. 6 ರಂದು ಆರೋಪ ಪಟ್ಟಿಯನ್ನು ಮೈಸೂರಿನ ಪೋಕ್ಸೋ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನೂ ಓದಿ :ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ
ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ಎಸ್. ಜಯಶ್ರೀ ಅವರು ಪ್ರಕರಣದ ವಿಚಾರಣೆ ನಡೆಸಿದರು. ಸಾಕ್ಷ್ಯಧಾರಗಳನ್ನು ಪರಿಶೀಲಿಸಿ, ಆರೋಪಿಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು.
ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕಿ ಎಂ.ಎಸ್.ಮಂಜುಳಾ ವಾದ ಮಂಡಿಸಿದ್ದರು.