Advertisement
ಮನವಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಇಂದರ್‌ಮೀತ್ ಕೌರ್, ಮನ ವಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಧಾಕೃಷ್ಣ ನಗರ ಉಪಚುನಾವಣೆಯ ಚುನಾವಣಾಧಿಕಾರಿಗೆ ಸೂಚನೆ ನೀಡಿದರು. ಮನವಿಯನ್ನು ತಿರಸ್ಕರಿಸಿದ್ದರೂ, ವಿಚಾರಣೆ ಮುಂದುವರಿಸಿರುವ ನ್ಯಾಯಾಲಯ, ಶಶಿಕಲಾ ಬಣ ಸಲ್ಲಿಸಿರುವ ಮನವಿಗೆ ಸಂಬಂಧಿಸಿ ದಂತೆ ತಮ್ಮ ವಾದವನ್ನು ಮಂಡಿಸುವಂತೆ ಚುನಾವಣಾ ಆಯೋಗ ಹಾಗೂ ಎಐಎಡಿಎಂಕೆಯ ಪನ್ನಿರ್ ಸೆಲ್ವಂ- ಪಳನಿಸ್ವಾಮಿ ಬಣಕ್ಕೆ ತಮ್ಮ ಕಡೆಯ ವಾದವನ್ನು ಮಂಡಿಸಲೂ ಅವಕಾಶ ನೀಡಿದೆ. ಇದೇ ವೇಳೆ, ಶಶಿಕಲಾ ಬಣಕ್ಕೆ ಚುನಾವಣಾ ಚಿಹ್ನೆ ನೀಡಲೇಬೇಕು. ಚಿಹ್ನೆಯಿಲ್ಲದೆ ಈ ಬಣ ಚುನಾವಣೆಗೆ ಇಳಿಯಲು ಸಾಧ್ಯವಿಲ್ಲ. ಈ ಬಣ ಚುನಾವಣೆಗೆ ಇಳಿಯದಿದ್ದರೆ, ಪಳನಿಸ್ವಾಮಿ -ಪನ್ನಿರ್ ಸೆಲ್ವಂ ಬಣಕ್ಕೆ ಅನಾಯಾಸವಾಗಿ ಜಯ ಸಿಕ್ಕಂತಾಗುತ್ತದೆ. ಇಂಥ ಅನಾಯಾಸ ಜಯಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಕಾರಣದಿಂದಾಗಿ ತಾನು ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಕರಣದ ಅಂತಿಮ ತೀರ್ಪು ನೀಡುವುದಾಗಿ ನ್ಯಾಯಾಲಯ ತಿಳಿಸಿದೆ.
ಇದೇ ವರ್ಷ ಏಪ್ರಿಲ್‌ನಲ್ಲಿ ಎಐಎಡಿಎಂಕೆಯ ಅಧಿಕೃತ ಚುನಾವಣಾ ಚಿಹ್ನೆ “ಎರಡೆಲೆ’ ತಮಗೇ ಬೇಕೆಂದು ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಬಣ ಗಳು ಪಟ್ಟು ಹಿಡಿದು ಚುನಾವಣಾ ಆಯೋ ಗದ ಮೊರೆ ಹೋಗಿದ್ದವು. ಆಗ, ಎರಡೆಲೆ ಚಿಹ್ನೆಯನ್ನು ತಾತ್ಕಾಲಿಕವಾಗಿ ನೇಪಥ್ಯಕ್ಕೆ ಸರಿಸಿದ್ದ ಆಯೋಗ, ಶಶಿಕಲಾ ಬಣಕ್ಕೆ ಟೋಪಿಯನ್ನು, ಪನ್ನೀರ್-ಪಳನಿ ಬಣಕ್ಕೆ ವಿದ್ಯುತ್ ಕಂಬದ ಚಿಹ್ನೆಗಳನ್ನು ತಾತ್ಕಾಲಿಕವಾಗಿ ನೀಡಿತ್ತು. ಕಳೆದ ತಿಂಗಳ 23ರಂದು ಪ್ರಕರಣದ ಅಂತಿಮ ತೀರ್ಪಿನಲ್ಲಿ ಆಯೋಗವು, ಎರಡೆಲೆ ಚಿಹ್ನೆಯನ್ನು ಪಳನಿ-ಪನ್ನೀರ್ ಬಣಕ್ಕೇ ನೀಡಿತಲ್ಲದೆ, ಶಶಿಕಲಾ ಬಣಕ್ಕೆ ತಾನು ನೀಡಿದ್ದ ಟೋಪಿ ಚಿಹ್ನೆಯ ಆದೇಶವನ್ನೂ ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ, ಶಶಿಕಲಾ ಬಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.