ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗೆ 20 ವರ್ಷ ಕಠಿನ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ತೆಂಕ ಎಡಪದವು ನಿವಾಸಿ ಪ್ರಕಾಶ್ (32) ಶಿಕ್ಷೆಗೀಡಾದ ಅಪರಾಧಿ. 2023ರ ಜನವರಿ 17ರಂದು ಬೆಳಗ್ಗೆ 10 ಗಂಟೆಗೆ ಸಂಬಂಧಿಯೇ ಆಗಿರುವ ಅಪರಾಧಿಯ ಮನೆಗೆ 14ರ ವಯಸ್ಸಿನ ಅಪ್ರಾಪ್ತ ವಯಸ್ಕ ಬಾಲಕಿ ತೆರಳಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಬಾಲಕಿಯನ್ನು ಅಡುಗೆ ಮನೆಗೆ ಎಳೆದೊಯ್ದ ಪ್ರಕಾಶ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ.
ಘಟನೆಯಿಂದ ನೊಂದ ಬಾಲಕಿ ತನ್ನ ಕೈಗಳನ್ನು ಬ್ಲೇಡಿನಿಂದ ಕುಯ್ದುಕೊಂಡಿದ್ದು, ಈ ವೇಳೆ ಆಕೆಯ ಸಹೋದರಿ ವಿಚಾರಿಸಿದಾಗ ಅತ್ಯಾಚಾರ ಬಯಲಿಗೆ ಬಂದಿದೆ. ಬಳಿಕ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯವು ಅಪರಾಧಿ ಪ್ರಕಾಶ್ 20 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿ, ದಂಡದ 50 ಸಾವಿರ ರೂ. ಹಣವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿದೆ.
ಅಲ್ಲದೆ ಹೆಚ್ಚುವರಿಯಾಗಿ 2,50,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ. ಸರಕಾರದ ಪರ ಕೆ. ಬದರಿನಾಥ್ ನಾಯರಿ ವಾದ ಮಂಡಿಸಿದ್ದಾರೆ.