Advertisement

ನ್ಯೂನತೆ ಇರುವ ಭ್ರೂಣ ತೆಗೆಸಲು ಕೋರ್ಟ್‌ ಅವಕಾಶ

06:46 AM Mar 13, 2019 | Team Udayavani |

ಬೆಂಗಳೂರು: ವೈದ್ಯಕೀಯ ಕಾರಣಗಳಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯೊಬ್ಬಳ 24 ವಾರದ ಭ್ರೂಣ ತೆಗೆಸಲು ಹೈಕೋರ್ಟ್‌ ಅವಕಾಶ ನೀಡಿದ್ದು, ಅತ್ಯಾಚಾರ ಪ್ರಕರಣ ತನಿಖೆ ದೃಷ್ಟಿಯಿಂದ ಭ್ರೂಣದ ಡಿಎನ್‌ಎ ಪರೀಕ್ಷೆ ಮಾಡುವಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗೆ ಮಂಗಳವಾರ ನಿರ್ದೇಶನ ನೀಡಿದೆ.

Advertisement

ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ ಚಿತ್ರದುರ್ಗ ಮೂಲದ 17 ವರ್ಷದ ಅಪ್ರಾಪ್ತೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆಲೋಕ್‌ ಆರಾಧೆ, ಸಂತ್ರಸ್ತೆಯ ಮನವಿ ಪುರಸ್ಕರಿಸಿದ್ದು, ತಜ್ಞ ವೈದ್ಯರ ವರದಿ ಆಧರಿಸಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.

ಈ ಹಿಂದೆ ಅರ್ಜಿ ವಿಚಾರಣೆಗೆ ಬಂದಿದ್ದಾಗ, ಅಪ್ರಾಪ್ತೆಯ ತಪಾಸಣೆ ನಡೆಸಿದ ವರದಿ ಸಲ್ಲಿಸುವಂತೆ ವಾಣಿ ವಿಲಾಸ ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯರ ತಂಡಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತ್ತು. ಅದರಂತೆ, ಮಂಗಳವಾರ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪರ ವಕೀಲೆ ಎಂ. ಸಿ. ನಾಗಶ್ರೀ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅರ್ಜಿದಾರಳ ಭ್ರೂಣಕ್ಕೆ ಸದ್ಯ 24 ವಾರವಾಗಿದೆ. ಭ್ರೂಣದ ತಲೆಭಾಗದಲ್ಲಿ ಸೀಳು ಕಾಣಿಸಿಕೊಂಡಿದೆ. ಮಗು ಜನಿಸಿದರೂ ಭವಿಷ್ಯದಲ್ಲಿ ಮತ್ತೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಆದ್ದರಿಂದ ಗರ್ಭಪಾತ ಮಾಡಿಸುವುದೇ ಸೂಕ್ತ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಅದರಂತೆ,  ಹಾಗಾಗಿ, ವೈದ್ಯಕೀಯ ಕಾರಣಗಳನ್ನು ಪರಿಗಣಿಸಿ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ನೀಡಲು ಅರ್ಜಿದಾರ ಸಂತ್ರಸ್ತೆಯ ಮನವಿಯನ್ನು ಪುರಸ್ಕರಿಸಲಾಗುತ್ತಿದೆ.

ಅತ್ಯಾಚಾರ ಪ್ರಕರಣದ ತನಿಖೆ ದೃಷ್ಟಿಯಿಂದ ಗರ್ಭದಿಂದ ಹೊರ ತೆಗೆದ ಭ್ರೂಣವನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಸಂರಕ್ಷಿಸಬೇಕು ಹಾಗೂ ಅದರ ಡಿಎನ್‌ಎ ಪರೀಕ್ಷೆ ಮಾಡಬೇಕು. ಸಂಬಂಧಪಟ್ಟ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಡಿಎನ್‌ಎ ಪರೀಕ್ಷೆಯ ವರದಿ ಪಡೆದುಕೊಳ್ಳಬೇಕು ಎಂದು ಆದೇಶಿಸಿತು.

Advertisement

ಅಲ್ಲದೇ, ಸಂತ್ರಸ್ತ ಅರ್ಜಿದಾರಳಿಗೆ ಪರಿಹಾರ ನೀಡುವ ಮತ್ತು ಗರ್ಭಪಾತಕ್ಕೆ ತಗಲುವ ವೆಚ್ಚ ಭರಿಸಲು ತುರ್ತಾಗಿ 70 ಸಾವಿರ ರೂ. ಹಣ ಬಿಡುಗಡೆ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಟಿಸ್‌ ಜಾರಿ ಮಾಡಿ, ನ್ಯಾಯಪೀಠ ವಿಚಾರಣೆ ಮುಂದೂಡಿತು.

ಸಂತ್ರಸ್ತೆಯ ಅಳಲು ಏನು?: ಅತ್ಯಾಚಾರ ಪ್ರಕರಣದಿಂದ ತಾನು ಗರ್ಭ ಧರಿಸಿದ್ದೇನೆ. ಸದ್ಯ ಭ್ರೂಣಕ್ಕೆ 24 ವಾರವಾಗಿದೆ. ಆದರೆ, ವೈದ್ಯಕೀಯ ತಪಾಸಣೆ ವೇಳೆ ಭ್ರೂಣದಲ್ಲಿ “ಬೈಲಾಟೆರಲ್‌ ಓಪನ್‌ ಲಿಪ್‌ ಸ್ಕೆಜೆನ್ಸಾಲಿ (ಭ್ರೂಣದ ತಲೆಭಾಗದಲ್ಲಿ ಸೀಳು) ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಮಗು ಜನಿಸಿದ ಮೇಲೆ ತೊಂದರೆ ಆಗಲಿದೆ. ಜತೆಗೆ, ಹೆರಿಗೆ ಸಮಯದಲ್ಲಿ ತನಗೆ ಅಪಾಯವಾಗುವ ಸಾಧ್ಯತೆಯೂ ಇದೆ. ಹಾಗಾಗಿ, ವಿಶೇಷ ಪ್ರಕರಣ ಎಂದು ಪರಿಗಣಿಸಿ, ವೈದ್ಯಕೀಯ ಕಾರಣಗಳ ಆಧಾರದಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅತ್ಯಾಚಾರ ಸಂತ್ರಸ್ತೆ ಹೈಕೋರ್ಟ್‌ಗೆ ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next