ಹಾವೇರಿ: ಕಾಲೇಜಿನಿಂದ ಉಚ್ಛಾಟಿಸಿ, ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಲು ನಿರಾಕರಿಸಿದ ಇಲ್ಲಿಯ ಜಿ.ಎಚ್. ಕಾಲೇಜಿನ ಕ್ರಮಕ್ಕೆ ವಿದ್ಯಾರ್ಥಿಯೋರ್ವ ನ್ಯಾಯಾಲಯದಿಂದ ಮಧ್ಯಂತರ ತಡೆ ತಂದು ಪರೀಕ್ಷೆ ಬರೆದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.
ನ್ಯಾಯಾಲಯದ ಆದೇಶ ಪತ್ರ ನೀಡಿದರೂ ಪ್ರಾಂಶುಪಾಲರು ಒಂದು ಗಂಟೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರಲಿಲ್ಲ. ತಮ್ಮ ಕಾರ್ಯಾಲಯದಲ್ಲಿ ಕೂರಿಸಿಕೊಂಡು, ಇಲ್ಲಸಲ್ಲದ ಆರೋಪ ಮಾಡಿ ಒಂದು ತಾಸು ಕಳೆದ ಮೇಲೆ ಅವಕಾಶ ನೀಡಿದ್ದಾರೆ ಎಂದು ವಿದ್ಯಾರ್ಥಿಪರ ವಕೀಲ ಎಸ್.ಆರ್. ಹೆಗಡೆ ಆರೋಪಿಸಿದ್ದಾರೆ.
ಏಕೆ ಉಚ್ಛಾಟನೆ ?: ತರಗತಿಗೆ ಹಾಜರಾಗದೇ ಕ್ಯಾಂಪಸ್‌ನಲ್ಲಿ ತಿರುಗುತ್ತ ಶಾಂತತೆ ಮತ್ತು ಶಿಸ್ತು ಉಲ್ಲಂಘಿಸಿರುವುದು, ಡ್ರೆಸ್ ಕೋಡ್ ಬದಲಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತ ಕಾಲೇಜಿಗೆ ಬರುವುದು, ಕಾಲೇಜಿನ ಹೂಕುಂಡ ಮತ್ತು ಸೂಚನಾ ಫಲಕಗಳಿಗೆ ಹಾನಿ, ಕಿಡಕಿ ಗಾಜು ಒಡೆದಿರುವುದು, ಹಲಗೆ ವಾದ್ಯದ ತಂಡ ಕರೆಸಿಕೊಂಡು ಕಾಲೇಜಿನ ಗೇಟಿನ ಮುಂದೆ ವಿಕಾರ ರೂಪದಲ್ಲಿ ನೃತ್ಯ ಮಾಡಿದ್ದು, ಮದ್ಯ ಸೇವಿಸಿ ಕಾಲೇಜಿಗೆ ಬಂದು ಅಸಭ್ಯ ವರ್ತನೆ, ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಆಗಮಿಸಿದ್ದ ವೇಳೆ ಮುಖಕ್ಕೆ ಬೇರೆ ಬಣ್ಣ ಬಳಿದುಕೊಂಡು ವಿಕಾರವಾಗಿ ಕೂಗುತ್ತ ಒಳಬಂದು ಅಗೌರವ ತೋರಿಸಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಗೆ ಅಗೌರವ ತೋರಿಸಿದ್ದು ಸೇರಿದಂತೆ 10 ಕಾರಣಗಳನ್ನು ನೀಡಿ ಕಾಲೇಜಿನ ಪ್ರಾಂಶುಪಾಲರು ಬಿಎ, ಬಿಕಾಂ ಪದವಿ ಓದುತ್ತಿದ್ದ 21 ವಿದ್ಯಾರ್ಥಿಗಳನ್ನು ಕಳೆದ ಮಾ. 28ರಂದು ಕಾಲೇಜಿನಿಂದ ಉಚ್ಛಾಟಿಸಿ ಆದೇಶಿಸಿದ್ದರು. ಈ ಕುರಿತು ಪಾಲಕರಿಗೆ ನೋಟಿಸ್ ಕಳಿಸಿದ್ದರು.
ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪಾಲಕರು ಬಂದು ಎಷ್ಟೇ ಕೇಳಿ ಕೊಂಡರೂ ಅವಕಾಶ ಕೊಡದೆ ಇರುವುದರಿಂದ ಓರ್ವ ವಿದ್ಯಾರ್ಥಿ ನ್ಯಾಯವಾದಿಗಳ ಮೂಲಕ ನ್ಯಾಯಾಲಯದ ಮೊರೆ ಹೋಗಿ ಮಧ್ಯಂತರ ಆದೇಶ ತಂದು ಪರೀಕ್ಷೆ ಬರೆದನು. ಉಳಿದ ವಿದ್ಯಾರ್ಥಿಗಳು ಹಣ ಇನ್ನಿತರ ಸಮಸ್ಯೆ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಿರಲಿಲ್ಲ.
Advertisement
ಬಿಎ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ನಿಖೀಲ್ ಕೊಟ್ರೇಶ ದೊಗ್ಗಳ್ಳಿ ಕಾಲೇಜಿನ ಕ್ರಮದ ವಿರುದ್ಧ ತಡೆಯಾಜ್ಞೆ ತಂದು ಪರೀಕ್ಷೆ ಬರೆದ ವಿದ್ಯಾರ್ಥಿ.
Related Articles
Advertisement
ಶುಕ್ರವಾರ ಸಹ ವಿದ್ಯಾರ್ಥಿ ಪಾಲಕರು, ವಿವಿಧ ಸಂಘ ಸಂಸ್ಥೆಯವರು ಬಂದು ವಿನಂತಿಸಿಕೊಂಡರೂ ಕಾಲೇಜು ಆಡಳಿತ ಮಂಡಳಿಯವರು ತಾವು ಮಾಡಿದ್ದೇ ಸರಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದರು.
ಏಕ ಕಾಲಕ್ಕೆ ಬರೋಬರಿ 21 ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡಿರುವ ಪ್ರಕರಣ ಮುಂದಿನ ದಿನದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸುಳಿವು ಅರಿತ ಆಡಳಿತ ಮಂಡಳಿಯವರು ಕೊನೆಯ ಘಳಿಗೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ನಿರ್ಣಯ ಕೈಗೊಂಡಿದೆ.
ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಸರಿಯಲ್ಲ. ಒಂದು ವೇಳೆ ವಿದ್ಯಾರ್ಥಿ ಅಶಿಸ್ತು ಪ್ರದರ್ಶಿಸಿದರೆ ಪಾಲಕರನ್ನು ಕರೆದು ತಿಳಿಹೇಳಬಹುದಿತ್ತು. ಕಾಲೇಜಿನಿಂದ ಉಚ್ಚಾಟಿಸಿರುವುದು, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದೆ ಇರುವುದು ವಿದ್ಯಾರ್ಥಿ ಹಕ್ಕು ಉಲ್ಲಂಘನೆಯಾಗಿದ್ದು, ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು.
•ಎಸ್.ಆರ್. ಹೆಗಡೆ, ವಿದ್ಯಾರ್ಥಿಗಳ ಪರ ವಕೀಲರು. ಕಾಲೇಜು ನಿಯಮ ಉಲ್ಲಂಘಿಸಿದ ಹಾಗೂ ಅಶಿಸ್ತು ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಉಚ್ಛಾಟಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಶಿಸ್ತು ಬರಬೇಕು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ.
•ಎಂ.ಎಸ್. ಯರಗೊಪ, ಪ್ರಾಂಶುಪಾಲರು, ಜಿಎಚ್ ಕಾಲೇಜು
•ಎಸ್.ಆರ್. ಹೆಗಡೆ, ವಿದ್ಯಾರ್ಥಿಗಳ ಪರ ವಕೀಲರು. ಕಾಲೇಜು ನಿಯಮ ಉಲ್ಲಂಘಿಸಿದ ಹಾಗೂ ಅಶಿಸ್ತು ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಉಚ್ಛಾಟಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಶಿಸ್ತು ಬರಬೇಕು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ.
•ಎಂ.ಎಸ್. ಯರಗೊಪ, ಪ್ರಾಂಶುಪಾಲರು, ಜಿಎಚ್ ಕಾಲೇಜು