Advertisement

ಉಡುಪಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು

10:25 PM Jun 28, 2022 | Team Udayavani |

ಉಡುಪಿ :  ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

Advertisement

ಕಾಪು ನಿವಾಸಿ ಆದರ್ಶ್‌(23) ಶಿಕ್ಷೆಗೊಳಪಟ್ಟ ಆರೋಪಿ. ಈತನು ಬಾಲಕಿಯ ತಂದೆ ಚಾಲಕರಾಗಿ ಕೆಲಸ ನಿರ್ವಹಿಸುವ ಲಾರಿಯಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡಿಕೊಂಡಿದ್ದ. ಅದೇ ಲಾರಿಯಲ್ಲಿ ರಾತ್ರಿ ಉಳಿದು ಕೊಳ್ಳುತ್ತಿದ್ದ ಆತ. 17ವರ್ಷ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿ ವಿಚಾರವನ್ನು ಮನೆಯಲ್ಲಿ ಹೇಳದಂತೆ ಬಾಲಕಿಗೆ ಬೆದರಿಸಿದ್ದ. ಅನಂತರ ಆರೋಪಿಯೂ ಬೇರೊಂದು ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಜೈಲುಪಾಲಾಗಿ ಅನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಮದುವೆ ಮಾಡಿಸಿ ಎಂದಿದ್ದ ಆರೋಪಿ
ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದ ಆರೋಪಿ ಬಾಲಕಿ ತಂದೆಯನ್ನು ಸಂಪರ್ಕಿಸಿ ನೊಂದ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದನು. ಆಕೆ ಅಪ್ರಾಪ್ತೆಯಾಗಿರುವುದರಿಂದ ತಂದೆತಾಯಿ ನಿರಾಕರಿಸಿದ್ದರು. ಆರೋಪಿ ತಂದೆ, ತಾಯಿಗೆ ಕೊಲೆ ಬೆದರಿಕೆ ಹಾಕಿ ಬಾಲಕಿಯನ್ನು ಉಡುಪಿಗೆ ಬರಲು ಹೇಳಿ ಅಪಹರಿಸಿ ಕಾಪುವಿಗೆ ಕರೆದುಕೊಂಡು ಹೋಗಿದ್ದನು. ಬಾಲಕಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದರು. ತನಿಖೆ ನಡೆಸಿದ ಅಂದಿನ ಮಹಿಳಾ ಪೊಲೀಸ್‌ ಠಾಣೆ ನಿರೀಕ್ಷಕ ಸಂಪತ್‌ ಕುಮಾರ್‌, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ : ಉದ್ಯೋಗದಲ್ಲಿ ಲಿಂಗ ತಾರತಮ್ಯ ರಹಿತ ನೀತಿ ಅನುಸರಿಸುತ್ತಿರುವ ಅಮೆಜಾನ್ ಇಂಡಿಯಾ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ನೊಂದ ಬಾಲಕಿಯ ಅಪಹರಣಕ್ಕೆ ಸಂಬಂಧಿಸಿ ಐದು ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, ಅತ್ಯಾಚಾರ ಎಸಗಿರುವುದಕ್ಕಾಗಿ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 20ಸಾವಿರ ರೂ. ದಂಡ ಹಾಗೂ ಅಪ್ರಾಪ್ತೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕಾಗಿ 7 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಒಟ್ಟು ಮೊತ್ತ 50 ಸಾವಿರ ರೂ. ನಲ್ಲಿ 45ಸಾವಿರ ರೂ. ನೊಂದ ಬಾಲಕಿಗೆ ಮತ್ತು 5ಸಾವಿರ ರೂ. ಸರಕಾರಕ್ಕೆ ನೀಡಬೇಕು. ನೊಂದ ಬಾಲಕಿಗೆ 4ಲಕ್ಷ ರೂ. ಪರಿಹಾರವನ್ನು ಸರಕಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಪ್ರಾಸಿಕ್ಯೂಷನ್‌ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next